ಸಾಂದರ್ಭಿಕ ಚಿತ್ರ
"ಮನೆಯೊಂದರಲ್ಲಿ ಮಗುವಿನ ನಗು ಮೊಳಗಬೇಕು, ತೊಟ್ಟಿಲು ತೂಗುವ ಸದ್ದು ಕೇಳಬೇಕು" ಎಂಬುದು ಪ್ರತಿಯೊಬ್ಬ ದಂಪತಿಯ ಆಳವಾದ ಕನಸು. ಆದರೆ, ವಿಧಿಯಾಟವೋ ಅಥವಾ ಬದಲಾಗುತ್ತಿರುವ ಕಾಲಘಟ್ಟದ ದೋಷವೋ, ಇಂದು ಲಕ್ಷಾಂತರ ದಂಪತಿಗಳು ನೈಸರ್ಗಿಕವಾಗಿ ಪೋಷಕರಾಗುವ ಸೌಭಾಗ್ಯದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಹತಾಶೆ ಮತ್ತು ಕತ್ತಲಿನ ಜೀವನದಲ್ಲಿ ಭರವಸೆಯ ಬೆಳಕನ್ನು ಚೆಲ್ಲುತ್ತಾ, ವೈದ್ಯಕೀಯ ವಿಜ್ಞಾನದ ಅದ್ಭುತದ ಮೂಲಕ ಕಂದಮ್ಮನ ಅಳು ಕೇಳಿಸುತ್ತಿರುವ ತೆರೆಮರೆಯ ಅಕ್ಷರಶಃ ಜೀವದ ಶಿಲ್ಪಿಗಳೇ 'ಭ್ರೂಣಶಾಸ್ತ್ರಜ್ಞರು' (Embryologists).
ಪ್ರತಿ ವರ್ಷ ಜುಲೈ 25ರಂದು ವಿಶ್ವ ಭ್ರೂಣಶಾಸ್ತ್ರಜ್ಞರ (World Embryologist Day) ಅಥವಾ ವಿಶ್ವ ಐವಿಎಫ್ ದಿನವನ್ನು ಆಚರಿಸಲಾಗುತ್ತದೆ. 1978ರ ಜುಲೈ 25 ರಂದು ಯುಕೆಯ (ಬ್ರಿಟನ್) ಓಲ್ಧ್ಯಾಮ್ ಜನರಲ್ ಆಸ್ಪತ್ರೆಯಲ್ಲಿ ಪ್ರಸಿದ್ಧ ಜೀವವಿಜ್ಞಾನಿ ರಾಬರ್ಟ್ ಎಡ್ವರ್ಡ್ಸ್ ಮತ್ತು ಸ್ತ್ರೀರೋಗ ತಜ್ಞ ಪ್ಯಾಟ್ರಿಕ್ ಸ್ಟೆಪ್ಟೋ ಅವರ ಅವಿರತ ಸಂಶೋಧನೆ ಹಾಗೂ ಶ್ರಮದ ಫಲವಾಗಿ ಜಗತ್ತಿನ ಮೊದಲ 'ಟೆಸ್ಟ್-ಟ್ಯೂಬ್ ಬೇಬಿ' (ಐವಿಎಫ್ ಮಗು) ಲೂಯಿಸ್ ಜಾಯ್ ಬ್ರೌನ್ ಜನಿಸಿದರು.
ಈ ಐತಿಹಾಸಿಕ ಯಶಸ್ಸು ಕೇವಲ ಒಂದು ಮಗುವಿನ ಜನನವಾಗಿರಲಿಲ್ಲ; ಬದಲಿಗೆ, ಬಂಜೆತನದಿಂದ ನರಳುತ್ತಿದ್ದ ಜಗತ್ತಿನ ಕೋಟ್ಯಂತರ ದಂಪತಿಗಳಿಗೆ ಲಭಿಸಿದ ಮರುಜನ್ಮವಾಗಿತ್ತು. ಇನ್ ವಿಟ್ರೊ ಫರ್ಟಿಲೈಸೇಶನ್ (IVF) ತಂತ್ರಜ್ಞಾನದ ಈ ಮಹತ್ವದ ಮೈಲಿಗಲ್ಲನ್ನು ಸ್ಮರಿಸಲು ಮತ್ತು ಈ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಭ್ರೂಣಶಾಸ್ತ್ರಜ್ಞರ ಕೊಡುಗೆಯನ್ನು ಗೌರವಿಸಲು ಈ ದಿನವನ್ನು ಜಗತ್ತಿನಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ಸಾಧನೆಯ ಹಿಂದಿದ್ದ ವೈದ್ಯರು ಮತ್ತು ವಿಜ್ಞಾನಿಗಳೊಂದಿಗೆ ಭ್ರೂಣಶಾಸ್ತ್ರಜ್ಞರ ಪಾತ್ರವೂ ಅತ್ಯಂತ ಮಹತ್ವದ್ದಾಗಿತ್ತು. ಅಂದಿನಿಂದಲೇ ಈ ದಿನಕ್ಕೆ ವಿಶೇಷ ಮಹತ್ವ ದೊರಕಿದೆ. ಸಂತಾನಹೀನತೆಯಿಂದ ಬಳಲುತ್ತಿರುವ ಲಕ್ಷಾಂತರ ದಂಪತಿಗಳಿಗೆ ಹೊಸ ಆಶಾಕಿರಣ ಮೂಡಿಸುವಲ್ಲಿ ಭ್ರೂಣಶಾಸ್ತ್ರಜ್ಞರ ಪಾತ್ರ ಅಪಾರವಾಗಿದೆ.
ಭ್ರೂಣಶಾಸ್ತ್ರಜ್ಞರು (Embryologists) ಮಾನವ ಭ್ರೂಣದ ಬೆಳವಣಿಗೆ, ಅಂಡಾಣು ಮತ್ತು ವೀರ್ಯಾಣುಗಳ ಸಂಯೋಜನೆ, ಭ್ರೂಣಗಳ ಸುರಕ್ಷಿತ ಬೆಳವಣಿಗೆ ಹಾಗೂ ಕೃತಕ ಗರ್ಭಧಾರಣೆ (IVF) ಪ್ರಕ್ರಿಯೆಯಲ್ಲಿ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಅತ್ಯಾಧುನಿಕ ಪ್ರಯೋಗಾಲಯಗಳಲ್ಲಿ ಸೂಕ್ಷ್ಮ ತಂತ್ರಜ್ಞಾನವನ್ನು ಬಳಸಿಕೊಂಡು ಆರೋಗ್ಯಕರ ಭ್ರೂಣಗಳನ್ನು ರೂಪಿಸಿ, ಯಶಸ್ವಿ ಗರ್ಭಧಾರಣೆಗೆ ನೆರವಾಗುವುದು ಇವರ ಪ್ರಮುಖ ಕಾರ್ಯವಾಗಿದೆ. ಈ ಕಾರ್ಯಕ್ಕೆ ವೈಜ್ಞಾನಿಕ ಜ್ಞಾನ, ತಾಳ್ಮೆ, ನಿಖರತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಅಗತ್ಯ.
ಇಂದಿನ ಆಧುನಿಕ ಯುಗದಲ್ಲಿ ಬಂಜೆತನದ ಸಮಸ್ಯೆ ಸಾಂಕ್ರಾಮಿಕ ರೋಗದಂತೆ ವೇಗವಾಗಿ ಹರಡುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳು ಇಂತಿವೆ:
ಅನಿಯಮಿತ ಜೀವನಶೈಲಿ ಮತ್ತು ನಿದ್ರಾಹೀನತೆ : ತಡರಾತ್ರಿ ಕೆಲಸ, ಒತ್ತಡದ ವಾತಾವರಣ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ.
ಆಹಾರ ಪದ್ಧತಿ : ಜಂಕ್ ಫುಡ್‌ಗಳ ಅತಿ ಬಳಕೆ, ಪೋಷಕಾಂಶಗಳ ಕೊರತೆ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.
ವೈವಾಹಿಕ ಜೀವನದ ವಿಳಂಬ: ವೃತ್ತಿಜೀವನದ ಅತಿಯಾದ ಆಸೆಯಿಂದಾಗಿ ತಡವಾಗಿ ಮದುವೆಯಾಗುವುದು ಮತ್ತು ಗರ್ಭಧಾರಣೆಗೆ ಯತ್ನಿಸುವುದು.
ಕೆಟ್ಟ ಅಭ್ಯಾಸಗಳು : ಧೂಮಪಾನ, ಮದ್ಯಪಾನ ಮತ್ತು ಮಾಲಿನ್ಯಭರಿತ ವಾತಾವರಣ.
ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂದಾಜಿನ ಪ್ರಕಾರ, ಪ್ರತಿ 6ರಲ್ಲಿ ಒಬ್ಬ ದಂಪತಿಗಳು ಬಂಜೆತನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ IVF ಸೇರಿದಂತೆ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನಗಳು (Assisted Reproductive Technologies) ಅನೇಕ ಕುಟುಂಬಗಳಿಗೆ ವರದಾನವಾಗಿವೆ. ಈ ಚಿಕಿತ್ಸೆಯ ಯಶಸ್ಸಿನಲ್ಲಿ ವೈದ್ಯರ ಜೊತೆಗೆ ಭ್ರೂಣಶಾಸ್ತ್ರಜ್ಞರ ಪರಿಣತಿ, ನಿಖರತೆ ಮತ್ತು ತಾಳ್ಮೆ ಅತ್ಯಂತ ಮಹತ್ವದ್ದಾಗಿದೆ.
ಭ್ರೂಣಶಾಸ್ತ್ರವು ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ಜೀವಶಾಸ್ತ್ರ, ಅನುವಂಶಿಕ ವಿಜ್ಞಾನ ಹಾಗೂ ಸಂತಾನೋತ್ಪತ್ತಿ ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೂ ಮಹತ್ತರ ಕೊಡುಗೆ ನೀಡುತ್ತಿದೆ. ಹೊಸ ಸಂಶೋಧನೆಗಳು, ಅತ್ಯಾಧುನಿಕ ಉಪಕರಣಗಳು ಮತ್ತು ವೈಜ್ಞಾನಿಕ ಪ್ರಗತಿಯಿಂದ ಈ ಕ್ಷೇತ್ರ ಇನ್ನಷ್ಟು ವಿಸ್ತರಿಸುತ್ತಿದೆ.
ಬಂಜೆತನದ ನೋವು, ಕಣ್ಣೀರು ಮತ್ತು ಸಮಾಜದ ಹೀಯಾಳಿಕೆಯಿಂದ ಜುಗುಪ್ಸೆಗೊಂಡ ದಂಪತಿಗಳ ಮೊಗದಲ್ಲಿ ಮಗುವಿನ ನಗುವನ್ನು ತಂದುಕೊಡುವಲ್ಲಿ ಭ್ರೂಣಶಾಸ್ತ್ರಜ್ಞರ ಪಾತ್ರ ದೇವರ ಸೃಷ್ಟಿಗೆ ಸಮನಾದದ್ದು. ಇವರು ಕೇವಲ ಪ್ರಯೋಗಾಲಯದಲ್ಲಿ ಜೀವಕೋಶಗಳೊಂದಿಗೆ ಕೆಲಸ ಮಾಡುವುದಿಲ್ಲ; ಬದಲಿಗೆ ಭಗ್ನಗೊಂಡ ಕುಟುಂಬಗಳಿಗೆ ನವಚೈತನ್ಯವನ್ನು, ಹೊಸ ಭರವಸೆಯನ್ನು ನೀಡುತ್ತಾರೆ. ಹಾಗಾಗಿಯೇ ವಿಶ್ವ ಭ್ರೂಣಶಾಸ್ತ್ರಜ್ಞರ ದಿನವು ಕೇವಲ ಒಂದು ವೃತ್ತಿಯನ್ನು ಗೌರವಿಸುವ ದಿನವಲ್ಲ. ಮಕ್ಕಳ ಕನಸು ಕಂಡು ವರ್ಷಗಳ ಕಾಲ ಹೋರಾಡಿದ ದಂಪತಿಗಳಿಗೆ ಹೊಸ ಭರವಸೆ ನೀಡಿದ ವಿಜ್ಞಾನ, ವೈದ್ಯಕೀಯ ಮತ್ತು ಮಾನವೀಯ ಸೇವೆಯನ್ನು ಸ್ಮರಿಸುವ ಈ ಮೌನ ಸೇವಕರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಕುಟುಂಬಗಳ ಕನಸುಗಳನ್ನು ನನಸಾಗಿಸುವಲ್ಲಿ ಅವರು ಸಲ್ಲಿಸುವ ಸೇವೆಯನ್ನು ಸಮಾಜ ಗುರುತಿಸಿ, ಅವರ ಶ್ರಮವನ್ನು ಪ್ರಶಂಸಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಇದೇ ಸಂದರ್ಭದಲ್ಲಿ ಸಂತಾನೋತ್ಪತ್ತಿ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ವೈಜ್ಞಾನಿಕ ಚಿಕಿತ್ಸೆಗಳ ಬಗ್ಗೆ ವಿಶ್ವಾಸ ಬೆಳೆಸುವುದು ಮತ್ತು ಮೂಢನಂಬಿಕೆಗಳನ್ನು ದೂರ ಮಾಡುವ ಸಂದೇಶವನ್ನೂ ಈ ದಿನ ಸಾರುತ್ತದೆ.
ಸಂಗ್ರಹ ಲೇಖನ : ವನಜಾಕ್ಷಿ ಪಿ ಚೆಂಬ್ರಕಾನ

0 Comments