Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ರಾಷ್ಟ್ರ ರಕ್ಷಣೆಯ ಅಚಲ ಕವಚ - ಸಿಆರ್‌ಪಿಎಫ್‌

                                                                           ಸಾಂದರ್ಭಿಕ ಚಿತ್ರ
ಭಾರತೀಯ ಗಣರಾಜ್ಯದ ಆಂತರಿಕ ಭದ್ರತೆ, ಸಾರ್ವಭೌಮತೆ ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಮ್ಮೆಯ ಅರೆಸೇನಾಪಡೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF). ದೇಶದ ಅತ್ಯಂತ ಹಳೆಯ ಮತ್ತು ಬೃಹತ್ ಅರೆಸೇನಾಪಡೆಯಾಗಿರುವ ಸಿಆರ್‌ಪಿಎಫ್, ದಶಕಗಳಿಂದ ದೇಶದ ಏಕತೆಗಾಗಿ ತನ್ನದೇ ಆದ ಅನನ್ಯ ಕೊಡುಗೆಯನ್ನು ನೀಡುತ್ತಾ ಬಂದಿದೆ. ಭಾರತದ ಆಂತರಿಕ ಭದ್ರತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಇಂದು ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ದೇಶದ ಅತಿದೊಡ್ಡ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಂದಾಗಿದೆ. ಜಮ್ಮು-ಕಾಶ್ಮೀರದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಿಂದ ಹಿಡಿದು ನಕ್ಸಲ್ ಪೀಡಿತ ಪ್ರದೇಶಗಳ ಕಾರ್ಯಾಚರಣೆಗಳವರೆಗೆ, ಚುನಾವಣೆಗಳ ಭದ್ರತೆ, ವಿಐಪಿ ಭದ್ರತೆ ಹಾಗೂ ಗಲಭೆ ನಿಯಂತ್ರಣ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಈ ಪಡೆ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಜನಸೇವೆ ಮತ್ತು ರಾಷ್ಟ್ರಸೇವೆಯನ್ನು ಸಮಾನವಾಗಿ ಕಾಣುವ ಈ ಪಡೆ ದೇಶದ ಹೆಮ್ಮೆಯಾಗಿದೆ. ಪ್ರತಿವರ್ಷ ಜುಲೈ 27 ರಂದು 'ಸಿಆರ್‌ಪಿಎಫ್ ಸ್ಥಾಪನಾ ದಿನ'ವನ್ನು ಆಚರಿಸಲಾಗುತ್ತದೆ. ಇದು ದೇಶದ ಭದ್ರತೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಸಿಆರ್‌ಪಿಎಫ್ ಯೋಧರ ಸೇವೆ, ತ್ಯಾಗ ಮತ್ತು ಸಮರ್ಪಣೆಯನ್ನು ಸ್ಮರಿಸುವ ಮಹತ್ವದ ದಿನವಾಗಿದೆ.

ಐತಿಹಾಸಿಕ ಹಿನ್ನೆಲೆ ಮತ್ತು ವಿಕಾಸ

ಸಿಆರ್‌ಪಿಎಫ್‌ನ ಇತಿಹಾಸವು ಬ್ರಿಟಿಷರ ಆಳ್ವಿಕೆಯ ಕಾಲದಷ್ಟು ಹಳೆಯದು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಉಂಟಾಗುತ್ತಿದ್ದ ಆಂತರಿಕ ಅಶಾಂತಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಬ್ರಿಟಿಷ್ ಸರ್ಕಾರಕ್ಕೆ ಒಂದು ಭದ್ರವಾದ ಪಡೆ ಅಗತ್ಯವಿತ್ತು.

ಉಗಮ : 1939 ಜುಲೈ 27 ರಂದು ಮಧ್ಯಪ್ರದೇಶದ ನೀಮುಚ್‌ನಲ್ಲಿ ‘ಕ್ರೌನ್ ರೆಪ್ರೆಸೆಂಟೇಟಿವ್ ಪೊಲೀಸ್’ (Crown Representative's Police) ಎಂಬ ಹೆಸರಿನೊಂದಿಗೆ ಈ ಪಡೆ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.

ಸ್ವಾತಂತ್ರ್ಯದ ನಂತರದ ಮರುನಾಮಕರಣ : 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಬಳಿಕ ದೇಶದ ಆಂತರಿಕ ಭದ್ರತೆಯ ಸ್ವರೂಪ ಸಂಪೂರ್ಣವಾಗಿ ಬದಲಾಯಿತು. ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ದೂರದೃಷ್ಟಿ ಮತ್ತು ಸಮರ್ಥ ನಾಯಕತ್ವದ ಫಲವಾಗಿ, ಡಿಸೆಂಬರ್ 28, 1949 ರಂದು ಸಂಸತ್ತಿನ ಕಾಯ್ದೆಯ ಮೂಲಕ ಇದಕ್ಕೆ ‘ಕೇಂದ್ರೀಯ ಮೀಸಲು ಪೊಲೀಸ್ ಪಡೆ’ (Central Reserve Police Force - CRPF) ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ಇಂದಿನವರೆಗೆ ಈ ಪಡೆ ದೇಶದ ಅತ್ಯಂತ ವಿಶ್ವಾಸಾರ್ಹ ಭದ್ರತಾ ಪಡೆಯಾಗಿ ಬೆಳೆದು ನಿಂತಿದೆ.

ರಾಷ್ಟ್ರೀಯ ಭದ್ರತೆಯಲ್ಲಿ ಸಿಆರ್‌ಪಿಎಫ್ ಪಾತ್ರ ಮತ್ತು ಜವಾಬ್ದಾರಿಗಳು

ಸಿಆರ್‌ಪಿಎಫ್ ಕೇವಲ ಗಡಿ ಕಾಯುವ ಪಡೆಯಲ್ಲ, ದೇಶದ ಒಳನಾಡಿನ ಅಖಂಡತೆಯನ್ನು ಕಾಪಾಡುವಲ್ಲಿ ಇದರ ಪಾತ್ರ ಬಹುದೊಡ್ಡದು. ವಿವಿಧ ಕಠಿಣ ಸನ್ನಿವೇಶಗಳಲ್ಲಿ ಈ ಪಡೆ ತನ್ನ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತದೆ:

  1. ಚುನಾವಣಾ ಭದ್ರತೆ : ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಭಯಮುಕ್ತವಾಗಿ ಮತ್ತು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯ ಪಾತ್ರ ಹಿರಿದಾದದ್ದು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಬಿಗಿ ಭದ್ರತೆಯನ್ನು ಒದಗಿಸುವಲ್ಲಿ ಇವರ ಶ್ರಮ ಶ್ಲಾಘನೀಯ.
  2. ಉಗ್ರರ ನಿಗ್ರಹ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಗಳು : ದೇಶದ ಆಂತರಿಕ ಭದ್ರತೆಗೆ ಸವಾಲಾಗಿರುವ ಕಾಶ್ಮೀರ ಕಣಿವೆಯ ಉಗ್ರರ ದಮನ ಕಾರ್ಯಾಚರಣೆಗಳಲ್ಲಿ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ (Red Corridor) ಸಿಆರ್‌ಪಿಎಫ್ ಯೋಧರು ಮುಂಚೂಣಿಯಲ್ಲಿದ್ದಾರೆ. ಜೀವದ ಹಂಗನ್ನು ತೊರೆದು ಈ ಕಠಿಣ ಪ್ರದೇಶಗಳಲ್ಲಿ ಅವರು ನಡೆಸುತ್ತಿರುವ ಕಾರ್ಯಾಚರಣೆಗಳು ದೇಶದ ರಕ್ಷಣೆಗೆ ಅವರ ಬದ್ಧತೆಯನ್ನು ಸಾರುತ್ತವೆ.
  3. ವಿಪತ್ತು ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳು : ದೇಶದಲ್ಲಿ ಯಾವುದೇ ಪ್ರಾಕೃತಿಕ ವಿಕೋಪಗಳು (ಪ್ರವಾಹ, ಭೂಕಂಪ, ಚಂಡಮಾರುತ) ಸಂಭವಿಸಿದಾಗ, ಸಿಆರ್‌ಪಿಎಫ್ ಯೋಧರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಜನರ ರಕ್ಷಣಾ ಕಾರ್ಯಗಳಲ್ಲಿ ಮತ್ತು ಪರಿಹಾರ ಸಾಮಗ್ರಿಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
  4. ಅಂತರರಾಷ್ಟ್ರೀಯ ಶಾಂತಿಪಾಲನೆ : ಕೇವಲ ಭಾರತದ ಗಡಿಯೊಳಗೆ ಮಾತ್ರವಲ್ಲದೆ, ವಿಶ್ವಸಂಸ್ಥೆಯ (UN) ಆಶ್ರಯದಲ್ಲಿ ಜರುಗುವ ಅಂತರರಾಷ್ಟ್ರೀಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲೂ ಭಾರತೀಯ ಸಿಆರ್‌ಪಿಎಫ್ ಪಡೆ ಭಾಗವಹಿಸಿ ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದೆ.

ಮಹಿಳಾ ಯೋಧರ ಹೆಮ್ಮೆಯ ಕೊಡುಗೆ

ಪುರುಷರಿಗೆ ಸರಿ ಸಮಾನವಾಗಿ ಹೆಗಲು ಕೊಟ್ಟು ದೇಶ ಸೇವೆ ಮಾಡುತ್ತಿರುವ ಮಹಿಳಾ ಸಿಆರ್‌ಪಿಎಫ್ ಪಡೆ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಏಷ್ಯಾದಲ್ಲೇ ಪ್ರಥಮ ಬಾರಿಗೆ ಮಹಿಳಾ ಅರೆಸೇನಾಪಡೆಯನ್ನು ರಚಿಸಿದ ಕೀರ್ತಿ ಸಿಆರ್‌ಪಿಎಫ್‌ಗೆ ಸಲ್ಲುತ್ತದೆ. ಇಂದು ಮಹಿಳಾ ಯೋಧರು ಗಣರಾಜ್ಯೋತ್ಸವದ ಪರೇಡ್‌ನಿಂದ ಹಿಡಿದು ನಕ್ಸಲ್ ಪೀಡಿತ ಪ್ರದೇಶಗಳ ಕಾರ್ಯಾಚರಣೆಗಳವರೆಗೆ ಎಲ್ಲ ರಂಗಗಳಲ್ಲೂ ತಮ್ಮ ಸಾಹಸವನ್ನು ಮೆರೆಯುತ್ತಿದ್ದಾರೆ.

ಸಿಆರ್‌ಪಿಎಫ್ ಯೋಧರು ಕಠಿಣ ಪರಿಸ್ಥಿತಿಗಳಲ್ಲಿಯೂ ಧೈರ್ಯ, ಶಿಸ್ತು ಮತ್ತು ರಾಷ್ಟ್ರಪ್ರೇಮದೊಂದಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಪ್ರಕೃತಿ ವಿಕೋಪಗಳಾದ ಪ್ರವಾಹ, ಭೂಕಂಪ, ಭೂಕುಸಿತ ಮತ್ತು ಚಂಡಮಾರುತಗಳ ಸಂದರ್ಭgಅಲಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ರಕ್ಷಣಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಂತು ಸಾವಿರಾರು ಜನರ ಜೀವ ಉಳಿಸಿದ್ದಾರೆ. ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅನೇಕ ಯೋಧರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ರಾಷ್ಟ್ರದ ಸುರಕ್ಷತೆಗೆ ಅಮರ ಸೇವೆ ಸಲ್ಲಿಸಿದ್ದಾರೆ. "ಸೇವೆ ಮತ್ತು ಲಾಯಲ್ಟಿ" (Service and Loyalty) ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಸಿಆರ್‌ಪಿಎಫ್, ಭಾರತೀಯರ ನಿದ್ರೆಗೆ ಭಂಗ ಬಾರದಂತೆ ಹಗಲಿರುಳು ಶ್ರಮಿಸುತ್ತಿರುವ ಕಾವಲುಗಾರ. ದೇಶದ ಪ್ರತಿಯೊಬ್ಬ ನಾಗರಿಕನೂ ನೆಮ್ಮದಿಯಿಂದ ಬದುಕಲು ಈ ಯೋಧರ ತ್ಯಾಗವೇ ಕಾರಣ. ಅನೇಕ ಸಿಆರ್‌ಪಿಎಫ್ ಯೋಧರು ಶೌರ್ಯಕ್ಕಾಗಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಗಳಾದ ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.

ಸಿಆರ್‌ಪಿಎಫ್ ಸ್ಥಾಪನಾ ದಿನ ಕೇವಲ ಆಚರಣೆಯಲ್ಲ. ದೇಶದ ಏಕತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿರುವ ಎಲ್ಲ ಯೋಧರಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ. ಅವರ ಧೈರ್ಯ, ತ್ಯಾಗ ಮತ್ತು ನಿಸ್ವಾರ್ಥ ಸೇವೆ ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆಯಾಗಿದೆ. ಮುಂದಿನ ಪೀಳಿಗೆಗೆ ದೇಶಪ್ರೇಮ ಮತ್ತು ಕರ್ತವ್ಯನಿಷ್ಠೆಯ ಅರಿವು ಮೂಡಿಸುವ ಮಹತ್ವದ ದಿನಗಳಲ್ಲೊಂದಾಗಿದೆ.

ಸಂಗ್ರಹ ಲೇಖನ : ವನಜಾಕ್ಷಿ. ಪಿ ಚೆಂಬ್ರಕಾನ

Post a Comment

0 Comments

ಜಾಹೀರಾತು

Responsive Advertisement