ಮಲಪ್ಪುರ : ಪಾಲಕ್ಕಾಡಿನ ಮಣ್ಣಾರ್ಕಾಡಿನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ವೇಳೆ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪಕ್ಕೆ ಮಾಜಿ ಸಚಿವ ಕೆ.ಟಿ. ಜಲೀಲ್ ಸ್ಪಷ್ಟನೆ ನೀಡಿದ್ದಾರೆ.
ತಾವು ವಿದ್ಯಾರ್ಥಿಯ ಕಿವಿಯನ್ನು ತಮಾಷೆಯಾಗಿ ಮುಟ್ಟಿದ್ದು ಮಾತ್ರವೇ ಹೊರತು, ನುಲಿಯಲಿಲ್ಲ ಅಥವಾ ನೋವುಂಟು ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಶಿಕ್ಷಕರಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಶೈಲಿಯಲ್ಲೇ ಮಾತನಾಡಿದ್ದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಾವುದೇ ವಿದ್ಯಾರ್ಥಿ ಅಥವಾ ಪೋಷಕರಿಗೆ ಅವಮಾನವಾಗಿದೆ ಎಂದು ಭಾಸವಾದರೆ ನೂರು ಬಾರಿ ಕ್ಷಮೆ ಕೇಳಲು ಸಿದ್ಧನಿದ್ದೇನೆ ಎಂದು ಜಲೀಲ್ ತಿಳಿಸಿದ್ದಾರೆ.
ಇಂದಿನ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಓದುವ ಅಭ್ಯಾಸ ಕಡಿಮೆಯಾಗಿದೆ. ಪಠ್ಯಪುಸ್ತಕಗಳ ಹೊರತಾಗಿ ಸಾಹಿತ್ಯ ಓದುವ ಪ್ರವೃತ್ತಿ ಬೆಳೆಸಬೇಕು ಎಂಬ ಉದ್ದೇಶದಿಂದಲೇ ಪ್ರಶ್ನೆಗಳನ್ನು ಕೇಳಿದ್ದೆ ಎಂದು ಅವರು ವಿವರಿಸಿದರು.
ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಪ್ರಶಂಸಿಸಿದ ಜಲೀಲ್, ಇತ್ತೀಚೆಗೆ ಸಾರ್ವಜನಿಕ ವೇದಿಕೆಗಳಲ್ಲಿ ನಡೆದ ಭಾಷಾ ಮತ್ತು ಸಂಖ್ಯಾ ಉಚ್ಚಾರಣೆಯ ತಪ್ಪುಗಳನ್ನು ಉಲ್ಲೇಖಿಸಿ ವ್ಯಂಗ್ಯವಾಡಿದರು. ಈ ಘಟನೆಗೆ ಸಂಬಂಧಿಸಿ ಬಾಲ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿದರೂ ಕಾನೂನು ಪ್ರಕ್ರಿಯೆಯನ್ನು ಎದುರಿಸಲು ಸಿದ್ಧನಿದ್ದೇನೆ. ಮುಂಗಡ ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ ಎಂದೂ ಕೆ.ಟಿ. ಜಲೀಲ್ ಹೇಳಿದ್ದಾರೆ.

0 Comments