ಕಾಸರಗೋಡು : ಉದುಮ ಗ್ರಾಮ ಪಂಚಾಯಿತಿಯಲ್ಲಿ ಎಲ್‌ಡಿಎಫ್ ಆಡಳಿತ ಅಂತ್ಯಗೊಂಡಿದ್ದು, ಸಿಪಿಎಂನ ಪಿ.ವಿ. ರಾಜೇಂದ್ರನ್ ವಿರುದ್ಧ ಯುಡಿಎಫ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ 12–11 ಮತಗಳ ಅಂತರದಲ್ಲಿ ಅಂಗೀಕಾರಗೊಂಡಿದೆ.
23 ಸದಸ್ಯರ ಪಂಚಾಯಿತಿಯಲ್ಲಿ ಯುಡಿಎಫ್‌ಗೆ 12 ಹಾಗೂ ಎಲ್‌ಡಿಎಫ್‌ಗೆ 11 ಸದಸ್ಯರ ಬಲವಿದೆ. ಆದರೆ ಅಧ್ಯಕ್ಷರ ಚುನಾವಣೆಯ ವೇಳೆ ಯುಡಿಎಫ್ ಅಭ್ಯರ್ಥಿ ಎನ್. ಚಂದ್ರನ್ ಅವರ ಮತಪತ್ರದ ಹಿಂಭಾಗದಲ್ಲಿ ಸಹಿ ಇಲ್ಲದ ಕಾರಣ ಮತ ಅಮಾನ್ಯಗೊಂಡಿತ್ತು. ಇದರಿಂದ ಉಭಯ ಮೈತ್ರಿಕೂಟಗಳಿಗೆ ತಲಾ 11 ಮತಗಳು ಬಂದಿದ್ದು, ಬಳಿಕ ನಡೆದ ಚೀಟಿ ಎಳೆಯುವ ಪ್ರಕ್ರಿಯೆಯಲ್ಲಿ ಪಿ.ವಿ. ರಾಜೇಂದ್ರನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಮಂಗಳವಾರ ಬೆಳಿಗ್ಗೆ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಯುಡಿಎಫ್ ಸದಸ್ಯ ಸಿಯಾಸ್ ಕಾಪ್ಪಿಲ್ ಅವಿಶ್ವಾಸ ನಿರ್ಣಯ ಮಂಡಿಸಿದರು. ಸುಮಾರು 45 ನಿಮಿಷಗಳ ಚರ್ಚೆಯ ಬಳಿಕ ಮತದಾನ ನಡೆದಿದ್ದು, ನಿರ್ಣಯ ಬಹುಮತದಿಂದ ಅಂಗೀಕಾರಗೊಂಡಿತು.
ಹೊಸ ಅಧ್ಯಕ್ಷರ ಆಯ್ಕೆ ನಡೆಯುವವರೆಗೆ ಉಪಾಧ್ಯಕ್ಷೆ ಫೌಸಿಯಾ ಅಬ್ದುಲ್ಲಾ ಅವರು ಪಂಚಾಯಿತಿ ಅಧ್ಯಕ್ಷರ ಹೆಚ್ಚುವರಿ ಹೊಣೆಗಾರಿಕೆಯನ್ನು ನಿರ್ವಹಿಸಲಿದ್ದಾರೆ.
ಸಭೆಯ ಮೇಲ್ವಿಚಾರಣೆಯನ್ನು ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿ ಕೆ.ಸಿ. ಅಜಿತ ನಡೆಸಿದರು. ಸಹಾಯಕ ಕಾರ್ಯದರ್ಶಿ ವಿ.ವಿ. ಶಶಿ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

0 Comments