ಪೆರ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗು ಜನಜಾಗೃತಿ ವೇದಿಕೆ ಜಂಟಿ ಆಶ್ರಯದಲ್ಲಿ ಮಾದಕ ವಸ್ತು ವಿರುದ್ಧ ವಿದ್ಯಾರ್ಥಿಗಳಿಗೆ ಜನಜಾಗೃತಿ ಮೂಡಿಸುವ ಸ್ವಾಸ್ತ್ಯ ಸಂಕಲ್ಪ ಆನ್ ಲೈನ್ ಕಾರ್ಯಕ್ರಮ ಜರಗಿತು. ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯ್ಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭವನ್ನು ಕ್ಯಾoಪ್ಕೋ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ಲ ಶುಭ ಹಾರೈಸಿದರು. ಶಾಲಾ ಪ್ರಬಂಧಕ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಜನಜಾಗೃತಿ ವೇದಿಕೆ ಪೆರ್ಲ ವಲಯಾಧ್ಯಕ್ಷ ಬಿ.ಪಿ. ಶೇಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ಲ ವಲಯ ಮೇಲ್ವಿಚಾರಕಿ ಜಯಶ್ರೀ, ಸೇವಾ ಪ್ರತಿನಿಧಿ ಚಂದ್ರಾವತಿ ಉಪಸ್ಥಿತರಿದ್ದರು. ಶಾಲೆಯ ಪ್ಲಸ್ ಟು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಆನ್ ಲೈನ್ ಜಾಗೃತಿ ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ಪೊಲೀಸಧಿಕಾರಿ ಡಾ. ವೆಂಕಟೇಶ್ ಪ್ರಸನ್ನ ಮತ್ತು ಬೆಂಗಳೂರಿನ ಖ್ಯಾತ ಹೃದಯ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ ಮಾದಕ ದ್ರವ್ಯಸೇವನೆಯಿಂದ ಆಗುವ ಹಾನಿ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಹೇಮಾವತಿ ವಿ. ಹೆಗಡೆ ಶುಭ ಹಾರೈಸಿದರು. ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್ ಆಶಯ ಭಾಷಣ ಮಾಡಿದರು. ಆನ್ ಲೈನ್ ಕಾರ್ಯಕ್ರಮ ವೀಕ್ಷಿಸಿದ ಬಳಿಕ ಧರ್ಮತಡ್ಕ ಶಾಲಾ ವಿದ್ಯಾರ್ಥಿಗಳಾದ ಸುಬ್ರಮಣ್ಯ ಕಶ್ಯಪ್ ಮತ್ತು ಜಯಶ್ರೀ ತಮ್ಮ ಅಭಿಪ್ರಾಯ ಮಂಡಿಸಿದರು. ಶಾಲಾ ಪ್ರಾoಶುಪಾಲ ಸತೀಶ್ ಶೆಟ್ಟಿ ಒಡ್ಡoಬೆಟ್ಟು ಸ್ವಾಗತಿಸಿ, ಧನ್ಯವಾದವಿತ್ತರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ನಿರ್ದೇಶಕ ವಿವೇಕ್ ವಿನ್ಸೆoಟ್ ಪಾಯಸ್ ಕಾರ್ಯಕ್ರಮ ನಿರೂಪಿಸಿದರು.


0 Comments