Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬಡಗಿ ಕೆಲಸದಲ್ಲಿ 22 ವರ್ಷದ ಬೆಡಗಿಯ ಕೈಚಳಕ : ವಂಶ ಪರಂಪರೆಯ ಕೆಲಸ ಮುಂದುವರಿಸುತ್ತಿರುವ ಮುಳಿಯಾರಿನ ಸ್ನೇಹಾ

ಕಾಸರಗೋಡು : ಮರದ ಕೆಲಸವೆಂದರೆ ಪುರುಷರ ವೃತ್ತಿ ಎಂಬ ಕಲ್ಪನೆಯನ್ನು ಮುರಿದು, ತನ್ನ ಪ್ರತಿಭೆಯಿಂದ ಗಮನ ಸೆಳೆಯುತ್ತಿರುವ ಯುವತಿಯೋರ್ವಳ ಸಾಧನೆ ಇದೀಗ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ. ಮುಳಿಯಾರ್ ಪಂಚಾಯತ್‌ನ ಬೋವಿಕ್ಕಾನ ನಿವಾಸಿ 22 ವರ್ಷದ ಸ್ನೇಹಾ ಪದವಿ ಹಾಗೂ ಸೈಬರ್ ಸೆಕ್ಯುರಿಟಿ ಡಿಪ್ಲೊಮಾ ಪಡೆದಿದ್ದರೂ, ಬಾಲ್ಯದಿಂದಲೇ ಇಷ್ಟಪಟ್ಟ ಮರದ ಕೆಲಸವನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.

ಬಾಲ್ಯದಲ್ಲಿ ತಂದೆ ಶಶಿಧರನ್ ಅವರೊಂದಿಗೆ ಮರದ ಕೆಲಸದ ಸ್ಥಳಕ್ಕೆ ಹೋಗುತ್ತಿದ್ದ ಸ್ನೇಹಾ, ಆರಂಭದಲ್ಲಿ ಸಣ್ಣಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದರು. ನಂತರ ಉಳಿ, ಸುತ್ತಿಗೆ ಸೇರಿದಂತೆ ವಿವಿಧ ಉಪಕರಣಗಳನ್ನು ಬಳಸುವುದನ್ನು ಕಲಿತು, ಕ್ರಮೇಣ ಪೀಠೋಪಕರಣ ತಯಾರಿಕೆಯ ಎಲ್ಲ ಹಂತಗಳಲ್ಲೂ ಪರಿಣತಿ ಪಡೆದರು. ಮಗಳ ಆಸಕ್ತಿಯನ್ನು ಗುರುತಿಸಿದ ತಂದೆ ಪ್ರೋತ್ಸಾಹ ನೀಡಿದ್ದರಿಂದ  ಅವರ ಯಶಸ್ಸಿನ ಹಾದಿ ಸುಗಮವಾಯಿತು. 

ಪ್ರಸ್ತುತ ಸ್ನೇಹಾ ಪೀಠೋಪಕರಣ ನಿರ್ಮಾಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಸುಮಾರು 30 ವರ್ಷಗಳ ಅನುಭವ ಹೊಂದಿರುವ ತಂದೆ ಶಶಿಧರನ್ ಅವರೇ ಇಂದಿಗೂ ಗುರು ಹಾಗೂ ಮಾರ್ಗದರ್ಶಕರಾಗಿದ್ದಾರೆ.

"ಮರದ ಕೆಲಸದಲ್ಲಿ ನಿಖರವಾದ ಅಳತೆ ಮತ್ತು ಲೆಕ್ಕಾಚಾರ ಅತ್ಯಂತ ಮುಖ್ಯ. ಸಣ್ಣ ತಪ್ಪೂ ಸಂಪೂರ್ಣ ನಿರ್ಮಾಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ" ಎಂದು ಸ್ನೇಹಾ ಹೇಳುತ್ತಾರೆ.

ಆರನೇ ತರಗತಿಯಿಂದಲೇ ಶಾಲಾ ವಿಜ್ಞಾನ ಮೇಳಗಳ ಮರದ ಕೆಲಸ ವಿಭಾಗದಲ್ಲಿ ಭಾಗವಹಿಸುತ್ತಿದ್ದ ಸ್ನೇಹಾ, ಹಲವು ವರ್ಷಗಳ ಕಾಲ ಏಕೈಕ ಮಹಿಳಾ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಪ್ರೌಢಶಾಲಾ ಮಟ್ಟದಲ್ಲೂ ಸುಮಾರು 40 ಸ್ಪರ್ಧಿಗಳ ನಡುವೆ ಏಕೈಕ ವಿದ್ಯಾರ್ಥಿನಿಯಾಗಿ  ಸ್ಪರ್ಧಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪುರುಷರೇ ಹೆಚ್ಚಾಗಿ ಕಾರ್ಯನಿರ್ವಹಿಸುವ ಕ್ಷೇತ್ರಕ್ಕೆ ಕಾಲಿಟ್ಟಾಗ ಎಲ್ಲರಿಂದಲೂ ಉತ್ತಮ ಬೆಂಬಲ ಮತ್ತು ಪ್ರೋತ್ಸಾಹ ಸಿಕ್ಕಿದೆ ಎಂದು ಸ್ನೇಹಾ ಸಂತಸ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಬೇರೆ ಉದ್ಯೋಗ ದೊರೆತರೂ, ತಾನು ಅತ್ಯಂತ ಪ್ರೀತಿಸುವ ಮರದ ಕೆಲಸವನ್ನು ಎಂದಿಗೂ ಬಿಡುವುದಿಲ್ಲ ಎಂದು ಅವರು ದೃಢವಾಗಿ ಹೇಳುತ್ತಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement