ಬೆಂಗಳೂರು : ನಗರದ ಹೊರವಲಯದ ಕಲ್ಲು ಕ್ವಾರಿಯೊಂದರಲ್ಲಿ ಸಂಭವಿಸಿದ ಭೀಕರ ಅವಘಡದಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಸಮೀಪ ನಡೆದಿದೆ.
ಕಾವೇರಿ ಕಂಪನಿಗೆ ಸೇರಿದ ಕ್ವಾರಿಯಲ್ಲಿ ಇಂದು ಬೆಳಿಗ್ಗೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಹೊಸ ಕ್ರಷರ್ ಸ್ಥಾಪನೆಗಾಗಿ ಸುಮಾರು 100 ಅಡಿ ಎತ್ತರದ ಪ್ರದೇಶದಲ್ಲಿ ಹಿಟಾಚಿ ಯಂತ್ರದ ಮೂಲಕ ಬಂಡೆ ತೆರವು ಕಾರ್ಯ ನಡೆಯುತ್ತಿತ್ತು. ಇದೇ ವೇಳೆ ಕೆಳಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಪ್ರಾಥಮಿಕ ಮಾಹಿತಿಯಂತೆ, ಮೇಲ್ಭಾಗದಿಂದ ಹಿಟಾಚಿ ಯಂತ್ರದ ಮೂಲಕ ತಳ್ಳಲಾದ ಬೃಹತ್ ಬಂಡೆಗಳು ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಉರುಳಿಬಿದ್ದಿವೆ. ಪರಿಣಾಮ ಸ್ಥಳದಲ್ಲೇ 7 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಕಾರ್ಮಿಕರು ಬಿಹಾರ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಅವಘಡದ ನಿಖರ ಕಾರಣದ ಕುರಿತು ತನಿಖೆ ಆರಂಭಿಸಿದ್ದಾರೆ.

0 Comments