ಸಾಂದರ್ಭಿಕ ಚಿತ್ರ
"ವಂದೇ ಮಾತರಂ..." - ಈ ಎರಡು ಪದಗಳನ್ನು ಉಚ್ಚರಿಸಿದಾಗ ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿಯೂ ದೇಶಪ್ರೇಮದ ಕಿಚ್ಚು ಹರಿಯುತ್ತದೆ. ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ಈ ಅಮರ ಗೀತೆಗೆ ಈಗ 150 ವರ್ಷಗಳ ಐತಿಹಾಸಿಕ ಪಯಣದ ಸಂಭ್ರಮ. ಗುಲಾಮಗಿರಿಯ ಸರಪಳಿಯಲ್ಲಿ ಸಿಲುಕಿದ್ದ ಭಾರತವನ್ನು ಜಾಗೃತಗೊಳಿಸಿದ ಮಹಾನ್ ಶಕ್ತಿ ಈ ಗೀತೆ. ಇದು ಕೇವಲ ಒಂದು ಗೀತೆಯಲ್ಲ, ದೇಶಭಕ್ತಿ, ಸ್ವಾತಂತ್ರ್ಯದ ಕನಸು ಮತ್ತು ಮಾತೃಭೂಮಿಯ ಮೇಲಿನ ಅಪಾರ ಪ್ರೀತಿಯ ಸಂಕೇತವಾಗಿದೆ. ಇಂದು “ವಂದೇ ಮಾತರಂ” ತನ್ನ 150 ವರ್ಷಗಳ ಐತಿಹಾಸಿಕ ಪಯಣವನ್ನು ಪೂರೈಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ.
ಬಂಕಿಮಚಂದ್ರ ಚಟರ್ಜಿ ಅವರು 1870ರ ದಶಕದ ಆರಂಭದಲ್ಲಿ ಈ ಗೀತೆಯನ್ನು ರಚಿಸಿದರು ಮತ್ತು 1876ರ ಸುಮಾರಿಗೆ ಇದು ಅಂತಿಮ ರೂಪ ಪಡೆಯಿತು ಎಂದು ಇತಿಹಾಸಕಾರರು ಗುರುತಿಸುತ್ತಾರೆ. ನಂತರ ಇದನ್ನು ತಮ್ಮ ಪ್ರಸಿದ್ಧ ಕಾದಂಬರಿ 'ಆನಂದಮಠ'ದಲ್ಲಿ (1882) ಅಳವಡಿಸಿದರು. ಬಂಗಾಳಿ ಮತ್ತು ಸಂಸ್ಕೃತ ಭಾಷೆಗಳ ಮಿಶ್ರಣದಲ್ಲಿರುವ ಈ ಗೀತೆ, ಮಾತೃಭೂಮಿಯ ಕಲ್ಪನೆಯನ್ನು ಕೇವಲ ಭೂಮಿಯಾಗಿ ನೋಡದೆ, ದೈವಿಕ ಶಕ್ತಿಯಾಗಿ ಬಿಂಬಿಸಿತು.
'ವಂದೇ ಮಾತರಂ' ಕೇವಲ ಹಾಡಾಗಿ ಉಳಿಯಲಿಲ್ಲ; ಭಾರತವನ್ನು ತಾಯಿಯಾಗಿ ಚಿತ್ರಿಸುವ ಈ ಗೀತೆ, ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಭಾರತೀಯರಿಗೆ ಸ್ಫೂರ್ತಿ ನೀಡಿತು. ಅದು ಸ್ವಾತಂತ್ರ್ಯ ಹೋರಾಟದ 'ಮಂತ್ರ'ವಾಯಿತು. 1905ರಲ್ಲಿ ಬಂಗಾಳ ವಿಭಜನೆಯ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಈ ಗೀತೆ ಮನೆಮಾತಾಯಿತು. ಲಾಠಿ ಏಟು ತಿಂದ ಹೋರಾಟಗಾರರು ಮರೆಯಲಾಗದಂತೆ 'ವಂದೇ ಮಾತರಂ' ಎಂದು ಘೋಷಿಸುತ್ತಿದ್ದರು. 1896ರ ಕಲ್ಕತ್ತಾ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಈ ಗೀತೆಯನ್ನು ಮೊದಲ ಬಾರಿಗೆ ಹಾಡಿದರು. ಮುಂದೆ ಸ್ವಾತಂತ್ರ್ಯ ಹೋರಾಟದ ಪ್ರತಿ ವೇದಿಕೆಯಲ್ಲಿಯೂ ಇದು ಪ್ರತಿಧ್ವನಿಸಿತು. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಅವರಂತಹ ಕ್ರಾಂತಿಕಾರಿಗಳಿಗೆ ಈ ಗೀತೆ ಅಪಾರ ಧೈರ್ಯ ತುಂಬಿತ್ತು. ಗಲ್ಲುಗಂಬ ಏರುವಾಗಲೂ ಅನೇಕ ಹೋರಾಟಗಾರರು ಈ ಗೀತೆಯನ್ನು ಹಾಡುತ್ತಾ ಪ್ರಾಣತ್ಯಾಗ ಮಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, 'ವಂದೇ ಮಾತರಂ'ಗೆ ರಾಷ್ಟ್ರಗೀತೆಯಾದ 'ಜನಗಣಮನ'ದಷ್ಟೇ ಸಮಾನವಾದ ಗೌರವವನ್ನು ನೀಡಲಾಯಿತು. 1950ರಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ಸಭೆಯಲ್ಲಿ, ಈ ಗೀತೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ ಪಾತ್ರವನ್ನು ಗುರುತಿಸಿ, ಇದನ್ನು ರಾಷ್ಟ್ರೀಯ ಗೀತೆಯಾಗಿ (National Song) ಘೋಷಿಸಿದರು. 150 ವರ್ಷಗಳ ನಂತರವೂ 'ವಂದೇ ಮಾತರಂ' ಅಷ್ಟೇ ಪ್ರಸ್ತುತವಾಗಿದೆ. ಕ್ರೀಡಾಂಗಣಗಳಲ್ಲಿ ವಿಜಯದ ಸಂಭ್ರಮವಾಗಿರಲಿ, ಗಡಿಯಲ್ಲಿ ಸೈನಿಕರ ಧೈರ್ಯವಾಗಿರಲಿ, ಅಥವಾ ದೇಶಾಭಿಮಾನದ ಕಾರ್ಯಕ್ರಮಗಳಾಗಿರಲಿ; 'ವಂದೇ ಮಾತರಂ' ಭಾರತೀಯರ ಏಕತೆಯ ಸಂಕೇತವಾಗಿ ಅಜರಾಮರವಾಗಿ ಉಳಿದಿದೆ. ಹೊಸ ತಲೆಮಾರಿಗೆ ಇದು ದೇಶಪ್ರೇಮ, ಏಕತೆ ಮತ್ತು ರಾಷ್ಟ್ರಭಕ್ತಿಯ ಸಂದೇಶವನ್ನು ಸಾರುತ್ತಿದೆ. 'ವಂದೇ ಮಾತರಂ' ಭಾರತದ ಇತಿಹಾಸ, ಸಂಸ್ಕೃತಿ ಮತ್ತು ರಾಷ್ಟ್ರೀಯ ಏಕತೆಯ ಪ್ರತಿಧ್ವನಿಯಾಗಿದೆ. 150 ವರ್ಷಗಳ ಈ ಸುದೀರ್ಘ ಪಯಣ ನಮಗೆ ಸ್ವಾತಂತ್ರ್ಯದ ಮೌಲ್ಯವನ್ನು ನೆನಪಿಸುವುದರ ಜೊತೆಗೆ, ದೇಶದ ಏಕತೆ, ಸಮಗ್ರತೆ ಮತ್ತು ಪ್ರಗತಿಗಾಗಿ ಪ್ರತಿಯೊಬ್ಬ ನಾಗರಿಕನು ತನ್ನ ಹೊಣೆಗಾರಿಕೆಯನ್ನು ಅರಿತು ನಡೆದುಕೊಳ್ಳುವಂತೆ ಪ್ರೇರೇಪಿಸುತ್ತದೆ.
“ವಂದೇ ಮಾತರಂ” ಕೇವಲ ಒಂದು ಗೀತೆ ಅಲ್ಲ; ಅದು ಭಾರತದ ಆತ್ಮದ ಧ್ವನಿ, ದೇಶಭಕ್ತಿಯ ಶಾಶ್ವತ ಸಂಕೇತ.
ಸಂಗ್ರಹ ಲೇಖನ : ಹರ್ಷ ರೈ ಪುತ್ರಕಳ

0 Comments