ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಆಡಳಿತ ಸಮಿತಿಯ ನೇತೃತ್ವದಲ್ಲಿ ಓಣಂ ಹಬ್ಬದ ಸಂಭ್ರಮಾಚರಣೆಯು ಶುಕ್ರವಾರ ಪಂಚಾಯಿತಿ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅವರು ಆಕರ್ಷಕವಾದ ಹೂವಿನ ರಂಗೋಲಿಯ ಮುಂದೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸೌಹಾರ್ದತೆ ಮತ್ತು ಸಮೃದ್ಧಿಯ ಸಂಕೇತವಾಗಿರುವ ಓಣಂ ಹಬ್ಬವು ಜನರಲ್ಲಿ ಒಗ್ಗಟ್ಟು ಹಾಗೂ ಭ್ರಾತೃತ್ವವನ್ನು ಬೆಳೆಸುತ್ತದೆ. ಒಂದು ದಿನದ ಮಟ್ಟಿಗೆ ತಮ್ಮ ಎಲ್ಲಾ ಒತ್ತಡಗಳನ್ನು ಬದಿಗೊತ್ತಿ ಸಮಾರಂಭದಲ್ಲಿ ಪಾಲ್ಗೊಂಡ ಜನಪ್ರತಿನಿಧಿಗಳು ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿಗೆ ಇದು ಅವಿಸ್ಮರಣೀಯ ದಿನವಾಗಿದೆ ಎಂದು ಅವರು ಹೇಳಿದರು.
ಆಚರಣೆಯ ಭಾಗವಾಗಿ ಆಯೋಜಿಸಲಾಗಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಜನಪ್ರತಿನಿಧಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅವರು ಶ್ರೀಕೃಷ್ಣನ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಹಿರಿಯ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕೆ., ಮಾಹಿನ್ ಕೇಳೋಟ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಒಪ್ಪನ ಹಾಗೂ ಹಾಡಿನ ಮೂಲಕ ಮಹಿಳಾ ಸದಸ್ಯರು ಗಮನಸೆಳೆದರು.
ಸಂಗೀತ ಕುರ್ಚಿ, ಸುಂದರಿಗೆ ಬೊಟ್ಟು ಇಡುವುದು ಮೊದಲಾದ ಸ್ಪರ್ಧೆಗಳು ಪೈಪೋಟಿಯಿಂದ ಕೂಡಿದ್ದವು. ಸಮಾರಂಭದಲ್ಲಿ ಪಂಚಾಯಿತಿ ಆಡಳಿತ ಸಮಿತಿಯ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದು, ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

0 Comments