ತಿರುವನಂತಪುರ : ಪಿಎಂಶ್ರೀ ಯೋಜನೆ ವಿಚಾರದಲ್ಲಿ ಯುಡಿಎಫ್‌ನಲ್ಲಿ ಭಿನ್ನಮತ ತಲೆದೋರಿದೆ. ಯೋಜನೆಯನ್ನು ಜಾರಿಗೊಳಿಸಬಾರದು ಎಂಬ ದೃಢ ನಿಲುವನ್ನು ಮುಸ್ಲಿಂ ಲೀಗ್ ಹೊಂದಿದೆ. ಈ ಕುರಿತು ಯಾವುದೇ ಹೊಸ ನಿರ್ಧಾರ ಕೈಗೊಂಡಿಲ್ಲ ಎಂದು ಶಿಕ್ಷಣ ಸಚಿವ ಎನ್. ಶಂಸುದ್ದೀನ್ ತಿಳಿಸಿದ್ದಾರೆ.
ಪಿಎಂಶ್ರೀ ಯೋಜನೆಯಿಂದ ಕೇರಳ ಹಿಂದೆ ಸರಿದರೆ ಸಮಗ್ರ ಶಿಕ್ಷಣ ಕೇರಳಕ್ಕೆ (ಎಸ್‌ಎಸ್‌ಕೆ) ನೀಡಲಾಗುವ ಅನುದಾನವನ್ನು ತಡೆಹಿಡಿಯುವುದಾಗಿ ಕೇಂದ್ರ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. 2027ರ ಮಾರ್ಚ್ ಒಳಗೆ ಯೋಜನೆಯ ಭಾಗವಾಗುವ ರಾಜ್ಯಗಳಿಗೆ ಮಾತ್ರ ಪಿಎಂಶ್ರೀ ಯೋಜನೆಯ ಸೌಲಭ್ಯಗಳು ಮತ್ತು ಎಸ್‌ಎಸ್‌ಕೆ ಅನುದಾನ ದೊರೆಯಲಿದೆ ಎಂದು ಕೇಂದ್ರ ತಿಳಿಸಿದೆ.
ಕೇರಳಕ್ಕೆ ಎಸ್‌ಎಸ್‌ಕೆ ಅನುದಾನದಡಿ ಒಟ್ಟು ಸುಮಾರು 1,500 ರೂ. ಬರಬೇಕಿದ್ದು, ಪ್ರಸಕ್ತ ವರ್ಷದ ರೂ.350 ಕೋಟಿಯೂ ಬಾಕಿಯಿದೆ. ಯೋಜನೆಯನ್ನು ಮುಂದುವರಿಸಬೇಕೆಂದು ಕೇಂದ್ರ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ವಿವಾದ ಮತ್ತೆ ತೀವ್ರಗೊಂಡಿದೆ.
ಈ ನಡುವೆ ಪಿಎಂಶ್ರೀ ಯೋಜನೆ ಜಾರಿಗೊಳಿಸಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಾ ದಾಸ್ ಮುನ್ಶಿ ಇತ್ತೀಚೆಗೆ ನಡೆದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಸೂಚಿಸಿದ್ದರು. ಇದೇ ನಿಲುವನ್ನು ಕಾಂಗ್ರೆಸ್‌ನ ಒಂದು ವಿಭಾಗದ ನಾಯಕರು ಕೂಡ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದಲ್ಲಿದ್ದಾಗ ಪಿಎಂಶ್ರೀ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದ ಯುಡಿಎಫ್, ಎಲ್‌ಡಿಎಫ್ ಸರ್ಕಾರ ಯೋಜನೆಗೆ ಸಹಿ ಹಾಕಿರುವುದರಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಈ ಹಿಂದೆ ಹೇಳಿತ್ತು. ಆದರೆ ಇದೀಗ ಮುಸ್ಲಿಂ ಲೀಗ್ ಸೇರಿದಂತೆ ಯುಡಿಎಫ್‌ನೊಳಗಿನಿಂದಲೇ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವುದು ಸರ್ಕಾರಕ್ಕೆ ಸಂಕಷ್ಟ ತಂದಿದೆ.
ಪಿಎಂಶ್ರೀ ಯೋಜನೆ ಜಾರಿಗೊಳಿಸಬಾರದು ಎಂಬುದು ತಮ್ಮ ಬಲವಾದ ಅಭಿಪ್ರಾಯವಾಗಿದ್ದರೂ, ಯೋಜನೆಯಿಂದ ಹಿಂದೆ ಸರಿಯುವುದರಲ್ಲಿ ಕೆಲವು ಮಿತಿಗಳಿವೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಪ್ರತಿಕ್ರಿಯಿಸಿದ್ದಾರೆ.

0 Comments