ತ್ರಿಶೂರು : ಕೈಪಮಂಗಲಂನಲ್ಲಿ ನಿಂತಿದ್ದ ಸರಕು ಲಾರಿಗೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಏಳು ಮಂದಿ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಕಾರಿನ ಚಾಲಕ ಕೂಡ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ರಾತ್ರಿ 12ರ ಸುಮಾರಿಗೆ ಅಪಘಾತ ಸಂಭವಿಸಿದೆ. ಡಿಂಡಿಗಲ್‌ನಿಂದ ಬಂದಿದ್ದ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ತಮಿಳುನಾಡು ನೋಂದಣಿಯ ಕಾರು, ಪನಂಬಿಕ್ಕುನ್ನು ಸೆಂಟರ್ ಬಳಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಮೃತರನ್ನು ಸೇಲಂನ ವಿಶ್ವಂ (20), ಡಿಂಡಿಗಲ್‌ನ ಸೂರ್ಯ (20), ಮದುರೈನ ಸಂತೋಷ್ (20), ಮದುರೈನ ಪ್ರಸನ್ನ ಹಾಗೂ ಡಿಂಡಿಗಲ್‌ನ ಯುವಸಂಜಿತ್ (20) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಪಿಎಸ್‌ಎನ್‌ಎ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಲಾರಿಯನ್ನು ರಾಷ್ಟ್ರೀಯ ಹೆದ್ದಾರಿಯ ವೇಗದ ಸಂಚಾರದ ಲೇನ್‌ನಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದ್ದು, ಸೂಕ್ತ ಎಚ್ಚರಿಕೆ ಫಲಕ ಅಳವಡಿಸದಿರುವುದು ಹಾಗೂ ಲಾರಿಯನ್ನು ಅನಧಿಕೃತವಾಗಿ ನಿಲ್ಲಿಸಿರುವುದೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ವೇಗವಾಗಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೃತ ವಿದ್ಯಾರ್ಥಿಗಳ ಮರಣೋತ್ತರ ಪರೀಕ್ಷೆ ಬೆಳಗ್ಗೆ 9 ಗಂಟೆ ಸುಮಾರಿಗೆ ಆರಂಭವಾಗಲಿದೆ ಎಂದು ವೈದ್ಯಕೀಯ ಕಾಲೇಜು ಅಧೀಕ್ಷಕರು ತಿಳಿಸಿದ್ದಾರೆ. ಮೃತದೇಹಗಳ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.

0 Comments