ಮಂಗಳೂರು : ಜಿಲ್ಲಾಡಳಿತ ನಿಗದಿಪಡಿಸಿರುವ ಪರಿಷ್ಕೃತ ಆಟೋ ಪ್ರಯಾಣ ದರದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ (SDTU), ದರವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದೆ.
ಆಟೋ ಚಾಲಕರಿಗೆ ನ್ಯಾಯಯುತ ಪ್ರಯಾಣ ದರ ನಿಗದಿಪಡಿಸುವಂತೆ ಎಸ್ ಡಿಟಿಯು ಮಂಗಳೂರು ನಗರ ಜಿಲ್ಲಾ ಸಮಿತಿ ಈ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಇಂಧನ ಬೆಲೆ, ವಾಹನ ನಿರ್ವಹಣೆ, ವಿಮೆ, ಬಿಡಿಭಾಗಗಳು ಹಾಗೂ ಟೈರ್‌ಗಳ ದರ ಹೆಚ್ಚಳವನ್ನು ಪರಿಗಣಿಸಿ ಕನಿಷ್ಠ ಪ್ರಯಾಣ ದರ 50ರೂ. ಮತ್ತು ಪ್ರತಿ ಕಿ.ಮೀ.ಗೆ 30ರೂ. ರನ್ನಿಂಗ್ ದರ ನಿಗದಿಪಡಿಸುವಂತೆ ಮನವಿ ಮಾಡಲಾಗಿತ್ತು.
ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ನೇತೃತ್ವದಲ್ಲಿ ನಡೆದ ಆಟೋ ಚಾಲಕರ ಯೂನಿಯನ್‌ಗಳ ಸಭೆಯಲ್ಲೂ ಎಸ್ ಡಿಟಿಯು ಇದೇ ಬೇಡಿಕೆಯನ್ನು ಮಂಡಿಸಿತ್ತು. ಆದರೆ ಜಿಲ್ಲಾಡಳಿತ ಇದೀಗ ಕನಿಷ್ಠ ದರವನ್ನು 40ರೂ. ಹಾಗೂ ಪ್ರತಿ ಕಿ.ಮೀ. ರನ್ನಿಂಗ್ ದರವನ್ನು 20ರೂ. ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಪ್ರಸ್ತುತ ಇಂಧನ ಹಾಗೂ ನಿರ್ವಹಣಾ ವೆಚ್ಚವನ್ನು ಪರಿಗಣಿಸಿದರೆ 20ರೂ. ರನ್ನಿಂಗ್ ದರದಲ್ಲಿ ಆಟೋ ಚಾಲಕರಿಗೆ ಸೂಕ್ತ ಆದಾಯ ಗಳಿಸುವುದು ಕಷ್ಟವಾಗಲಿದೆ ಎಂದು ಎಸ್ ಡಿಟಿಯು ತಿಳಿಸಿದೆ. ಇದರಿಂದ ಚಾಲಕರ ಕುಟುಂಬ ನಿರ್ವಹಣೆ ಹಾಗೂ ಜೀವನೋಪಾಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಂಘಟನೆ ಹೇಳಿದೆ.
ನೂತನ ದರವನ್ನು ಮರುಪರಿಶೀಲಿಸಿ, ಆಟೋ ಚಾಲಕರ ಸಂಘಟನೆಗಳೊಂದಿಗೆ ಮತ್ತೊಮ್ಮೆ ಸಮಾಲೋಚನೆ ನಡೆಸಬೇಕು. ಕನಿಷ್ಠ ದರ 50ರೂ. ಹಾಗೂ ರನ್ನಿಂಗ್ ದರ 30ರೂ. ನಿಗದಿಪಡಿಸುವ ಮೂಲಕ ಚಾಲಕರಿಗೆ ನ್ಯಾಯ ಒದಗಿಸಬೇಕು ಎಂದು ಎಸ್ ಡಿಟಿಯು ಮಂಗಳೂರು ನಗರ ಜಿಲ್ಲಾ ಅಧ್ಯಕ್ಷ ರಹಿಮಾನ್ ಬೋಳಿಯಾರ್ ಆಗ್ರಹಿಸಿದ್ದಾರೆ.

0 Comments