ಮಂಗಳೂರು : ಹುಟ್ಟುಹಬ್ಬವನ್ನು ಕೇವಲ ಮೋಜು-ಮಸ್ತಿಗೆ ಸೀಮಿತಗೊಳಿಸದೆ, ಸಮಾಜಮುಖಿ ಕಾರ್ಯಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಹಾನ್ ಅಳ್ವ ಅವರು ಮಾದರಿಯಾಗಿದ್ದಾರೆ.
ನಗರದ ಕುಲಶೇಖರ ಸರಿಪಳ್ಳದಲ್ಲಿರುವ ವಿಶೇಷಚೇತನರ ಸೇವಾ ಸಂಸ್ಥೆ ರಿಯಾ ಫೌಂಡೇಶನ್ ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ ಅವರು, ಅಲ್ಲಿನ ಮುಗ್ಧ ನಿವಾಸಿಗಳೊಂದಿಗೆ ಸಮಯ ಕಳೆಯುವುದರ ಜೊತೆಗೆ ಆಹಾರ ಮತ್ತು ಪಡಿತರ ಸಾಮಗ್ರಿಗಳನ್ನು ವಿತರಿಸಿದರು.
ಮಧ್ಯಮದಿಂದ ತೀವ್ರ ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ಮಕ್ಕಳು ಹಾಗೂ ವ್ಯಕ್ತಿಗಳಿಗೆ ಆಜೀವ ವಸತಿ ಆರೈಕೆ, ವೈದ್ಯಕೀಯ ನೆರವು, ಚಿಕಿತ್ಸಾ ಸೇವೆ ಹಾಗೂ ವೃತ್ತಿಪರ ತರಬೇತಿ ಒದಗಿಸುತ್ತಿರುವ ರಿಯಾ ಫೌಂಡೇಶನ್, ವಿಶೇಷಚೇತನರ ಬದುಕಿಗೆ ಆಸರೆಯಾಗಿ ಕಾರ್ಯನಿರ್ವಹಿಸುತ್ತಿದೆ.
2010ರಲ್ಲಿ ಆಶ್ಲಿ ಫೆರ್ನಾಂಡಿಸ್ ಹಾಗೂ ಅವರ ಸಹಯೋಗಿಗಳ ಪ್ರಯತ್ನದಿಂದ ಆರಂಭಗೊಂಡ ಫೌಂಡೇಶನ್‌ನ ಚಿಕಿತ್ಸಾ ಮತ್ತು ವಸತಿ ಕೇಂದ್ರವು ವರ್ಷಪೂರ್ತಿ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ವಿಶೇಷ ಆರೈಕೆಯ ಅಗತ್ಯವಿರುವ ನಿವಾಸಿಗಳಿಗೆ ಸುರಕ್ಷಿತ ಹಾಗೂ ಆರೈಕೆಯ ವಾತಾವರಣವನ್ನು ಕಲ್ಪಿಸುತ್ತಿದೆ.
ಹುಟ್ಟುಹಬ್ಬವನ್ನು ವೈಯಕ್ತಿಕ ಸಂಭ್ರಮಕ್ಕೆ ಸೀಮಿತಗೊಳಿಸದೆ, ವಿಶೇಷಚೇತನರೊಂದಿಗೆ ಹಂಚಿಕೊಂಡು ಅವರ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಸುಹಾನ್ ಅಳ್ವ ಅವರು ಮಾನವೀಯ ಹಾಗೂ ಸಮಾಜಮುಖಿ ಸಂದೇಶ ಸಾರಿದ್ದಾರೆ. ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಪದಾಧಿಕಾರಿಗಳು ಹಾಗೂ ರಿಯಾ ಫೌಂಡೇಶನ್‌ನ ಪ್ರಮುಖರು ಉಪಸ್ಥಿತರಿದ್ದರು.
.png)
0 Comments