ಕುಂಬಳೆ : ಪತ್ರಕರ್ತರೆಂದು ಹೇಳಿಕೊಂಡು ಸರ್ಕಾರಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅನಧಿಕೃತವಾಗಿ ಫೋಟೋ, ವಿಡಿಯೋ ಚಿತ್ರೀಕರಣ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕುಂಬಳೆ ಪ್ರೆಸ್ ಫೋರಂ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಡಿಜಿಪಿಗೆ ಮನವಿ ಸಲ್ಲಿಸಿದೆ.
ಮಂಜೇಶ್ವರ, ಉಪ್ಪಳ ಹಾಗೂ ಕುಂಬಳೆ ಪ್ರದೇಶಗಳಲ್ಲಿ ಯಾವುದೇ ಮಾನ್ಯತೆ ಇಲ್ಲದೆ ಪತ್ರಕರ್ತರ ಹೆಸರಿನಲ್ಲಿ ಕಾರ್ಯನಿರ್ವಹಿಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಸಚಿವರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳು ಭಾಗವಹಿಸುವ ಕಾರ್ಯಕ್ರಮಗಳಿಗೆ ನಕಲಿ ಗುರುತಿನ ಚೀಟಿ ಬಳಸಿ ಪ್ರವೇಶಿಸಿ ವೇದಿಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವುದರಿಂದ ನೈಜ ಪತ್ರಕರ್ತರು ತಮ್ಮ ವೃತ್ತಿ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ತಿಳಿಸಲಾಗಿದೆ.
ಅನುಮತಿಯಿಲ್ಲದೆ ವಾಹನಗಳಲ್ಲಿ ಪ್ರೆಸ್ ಸ್ಟಿಕ್ಕರ್ ಅಳವಡಿಸಿಕೊಂಡು ಸಂಚರಿಸುವವರ ವಿರುದ್ಧವೂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಮಾಧ್ಯಮ ಸಂಸ್ಥೆಗಳು, ಪ್ರೆಸ್ ಕ್ಲಬ್‌ಗಳು ಅಥವಾ ಪ್ರೆಸ್ ಫೋರಂಗಳ ಯಾವುದೇ ಮಾನ್ಯತೆ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ‘ಮೀಡಿಯಾ’ ಹೆಸರಿನಲ್ಲಿ ಹಣ ಸಂಗ್ರಹಿಸುವುದು ಹಾಗೂ ವಂಚನೆ ನಡೆಸುವವರ ವಿರುದ್ಧವೂ ತನಿಖೆ ಬಲಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ಮಾಧ್ಯಮ ಕ್ಷೇತ್ರದೊಂದಿಗೆ ಯಾವುದೇ ಸಂಬಂಧ ಅಥವಾ ಅನುಭವ ಇಲ್ಲದವರು ಸಾಮಾಜಿಕ ಜಾಲತಾಣ ಚಾನೆಲ್‌ಗಳ ಹೆಸರಿನಲ್ಲಿ ಪತ್ರಕರ್ತರಂತೆ ಗುರುತಿಸಿಕೊಳ್ಳುತ್ತಿದ್ದಾರೆ. ವೆಬ್‌ಸೈಟ್ ಅಥವಾ ನೋಂದಾಯಿತ ಡೊಮೇನ್ ಇಲ್ಲದಿದ್ದರೂ ಆನ್‌ಲೈನ್ ಮಾಧ್ಯಮದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವವರೂ ಇದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮಂಜೇಶ್ವರ ಪ್ರದೇಶದಲ್ಲಿ ಪ್ರೆಸ್ ಸ್ಟಿಕ್ಕರ್ ಬಳಸಿ ಮಾದಕವಸ್ತು ಹಾಗೂ ಮರಳು ಸಾಗಣೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ಎಸ್ಕಾರ್ಟ್ ಸೇವೆ ಒದಗಿಸುತ್ತಿರುವ ಬಗ್ಗೆ ಈ ಹಿಂದೆಯೂ ದೂರುಗಳು ಬಂದಿದ್ದವು. ಈ ಕುರಿತು ಪ್ರೆಸ್ ಫೋರಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಮುಂದಿನ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಲಾಗಿದೆ.
ಸರ್ಕಾರಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾನ್ಯತೆ ಪಡೆದ ಗುರುತಿನ ಚೀಟಿ ಪರಿಶೀಲನೆ ಮತ್ತು ಪ್ರವೇಶ ನಿಯಂತ್ರಣ ಜಾರಿಗೊಳಿಸುವುದು, ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು, ನೈಜ ಪತ್ರಕರ್ತರ ಸುರಕ್ಷತೆ ಹಾಗೂ ವೃತ್ತಿ ಸ್ವಾತಂತ್ರ್ಯ ಖಚಿತಪಡಿಸಲು ರಾಜ್ಯಮಟ್ಟದ ಮಾರ್ಗಸೂಚಿ ಹೊರಡಿಸುವುದು ಮತ್ತು ಪತ್ರಕರ್ತರ ಹೆಸರಿನಲ್ಲಿ ಬೆದರಿಸಿ ಹಣ ವಸೂಲಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರೆಸ್ ಫೋರಂ ಆಗ್ರಹಿಸಿದೆ.
ಈ ವಿಷಯದ ಗಂಭೀರತೆಯನ್ನು ಮುಖ್ಯಮಂತ್ರಿಯನ್ನು ನೇರವಾಗಿ ಭೇಟಿಯಾಗಿ ಮನವರಿಕೆ ಮಾಡಿಕೊಡುವುದಾಗಿ ಪ್ರೆಸ್ ಫೋರಂ ತಿಳಿಸಿದೆ. ‘ಆಪರೇಷನ್ ತೂಫಾನ್’ ಮಾದರಿಯಲ್ಲಿ ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರೆಸ್ ಫೋರಂ ಅಧ್ಯಕ್ಷ ಅಬ್ದುಲ್ಲಾ ಕುಂಬಳೆ ಹಾಗೂ ಕಾರ್ಯದರ್ಶಿ ಐ. ಮೊಹಮ್ಮದ್ ರಫೀಕ್ ಒತ್ತಾಯಿಸಿದ್ದಾರೆ.

0 Comments