ಪುತ್ತೂರು: ಹತ್ತು ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡ ಪುತ್ತೂರು ನ್ಯಾಯಾಲಯ ಸಂಕೀರ್ಣದ ತಡೆಗೋಡೆಯ ಒಂದು ಭಾಗ ಭಾರಿ ಮಳೆ ಹಾಗೂ ಗಾಳಿಯ ಪರಿಣಾಮ ಕುಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಸಂಜೆ ಸುರಿದ ಭಾರಿ ಮಳೆ ಹಾಗೂ ಬೀಸಿದ ಬಿರುಗಾಳಿಗೆ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿದ್ದ ತಡೆಗೋಡೆಯ ಒಂದು ಭಾಗ ಏಕಾಏಕಿ ಕುಸಿದಿದೆ. ಅದೃಷ್ಟವಶಾತ್ ಘಟನೆಯ ವೇಳೆ ಯಾರೂ ಸ್ಥಳದಲ್ಲಿರದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ತಡೆಗೋಡೆ ಕುಸಿದಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ತಡೆಗೋಡೆ ನಿರ್ಮಾಣದ ಕಾಮಗಾರಿಯ ಗುಣಮಟ್ಟ ಹಾಗೂ ಬಳಸಲಾದ ಸಾಮಗ್ರಿಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಇದರ ನಡುವೆ ನ್ಯಾಯಾಲಯ ಸಂಕೀರ್ಣದ ಕ್ಯಾಂಟೀನ್ ಕಟ್ಟಡದ ಗೋಡೆಯಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಕಟ್ಟಡ ಉದ್ಘಾಟನೆಯಾಗಿ ಕೇವಲ ಹತ್ತು ತಿಂಗಳು ಕಳೆದಿರುವ ಸಂದರ್ಭದಲ್ಲೇ ಆವರಣದ ತಡೆಗೋಡೆ ಕುಸಿತ ಹಾಗೂ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಕಾಮಗಾರಿಯ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೊಸದಾಗಿ ನಿರ್ಮಿಸಲಾದ ನ್ಯಾಯಾಲಯ ಸಂಕೀರ್ಣದಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

0 Comments