ತಿರುವನಂತಪುರ : ಕೇರಳದಲ್ಲಿ ಮುಂದಿನ ದಿನಗಳಲ್ಲೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಶುಕ್ರವಾರ ರಾಜ್ಯದ ಒಂಬತ್ತು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು, ಕಣ್ಣೂರು, ಕೊಲ್ಲಂ, ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಳಂ, ಇಡುಕ್ಕಿ, ಕೋಝಿಕ್ಕೋಡ್ ಹಾಗೂ ವಯನಾಡು, ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಶನಿವಾರ ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಳಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ ಮೂರು ಗಂಟೆಗಳಲ್ಲಿ ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಮಲಪ್ಪುರಂ, ಕೋಝಿಕ್ಕೋಡ್ ಹಾಗೂ ಕಾಸರಗೋಡು ಜಿಲ್ಲೆಗಳ ಪ್ರತ್ಯೇಕ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗಂಟೆಗೆ 50 ಕಿ.ಮೀ. ವೇಗದವರೆಗೆ ಬಲವಾದ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಕಾಸರಗೋಡು ಜಿಲ್ಲೆಗೆ ಮುಂದಿನ ಮೂರು ಗಂಟೆಗಳ ಅವಧಿಗೆ ಮಾತ್ರ ಆರೆಂಜ್ ಅಲರ್ಟ್ ಸೂಚನೆ ನೀಡಲಾಗಿದೆ.
ಇದೇ ವೇಳೆ, ಕೇರಳ, ಕರ್ನಾಟಕ ಹಾಗೂ ಲಕ್ಷದ್ವೀಪ ಕರಾವಳಿಗಳಲ್ಲಿ ಶುಕ್ರವಾರ ಮತ್ತು ಶನಿವಾರ ಮೀನುಗಾರಿಕೆಗೆ ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಲಾಗಿದೆ. ದಕ್ಷಿಣ ಕೇರಳದ ಸಮೀಪ ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಸಮುದ್ರ ಮಟ್ಟದಿಂದ 5.8 ಕಿ.ಮೀ. ಎತ್ತರದಲ್ಲಿ ಒಂದು ಚಂಡಮಾರುತದ ಸುಳಿಗಾಳಿ ಸಕ್ರಿಯವಾಗಿದೆ. ಮತ್ತೊಂದು ಸುಳಿಗಾಳಿ ಉತ್ತರ ತಮಿಳುನಾಡಿನ ಮೇಲ್ಭಾಗದಲ್ಲಿ ಸಮುದ್ರ ಮಟ್ಟದಿಂದ 5.8 ಕಿ.ಮೀ. ಎತ್ತರದಲ್ಲಿ ನೆಲೆಗೊಂಡಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

0 Comments