ತಿರುವನಂತಪುರ : ರಾಜ್ಯದ ಕೆಎಸ್‌ಆರ್‌ಟಿಸಿ ಬಸ್ ಟರ್ಮಿನಲ್‌ಗಳಲ್ಲಿ ಮಹಿಳೆಯರಿಗೆ ಕಡಿಮೆ ದರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಲಭ್ಯವಾಗುವ ಯೋಜನೆಗೆ ಚಾಲನೆ ನೀಡಲಾಗಿದೆ.
ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಯಂತ್ರ ಹಾಗೂ ಇನ್ಸಿನರೇಟರ್‌ನ ಕಾರ್ಯಾರಂಭವನ್ನು ತಂಬಾನೂರು ಕೆಎಸ್‌ಆರ್‌ಟಿಸಿ ಬಸ್ ಟರ್ಮಿನಲ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕಾರ್ಮಿಕ ಇಲಾಖೆ ಸಚಿವೆ ಬಿಂದು ಕೃಷ್ಣ ಉದ್ಘಾಟಿಸಿದರು.
ಮಹಿಳೆಯರ ಘನತೆ ಮತ್ತು ಆರೋಗ್ಯ ರಕ್ಷಣೆಯನ್ನು ಸಮಾಜ ಕಲ್ಪಿಸಬೇಕಾದ ಮೂಲಸೌಕರ್ಯದ ಭಾಗವಾಗಿ ಪರಿಗಣಿಸಬೇಕು ಎಂದು ಸಚಿವೆ ಹೇಳಿದರು. ‘ವಿಮೆನ್ ಆನ್ ದ ಮೂವ್ ಆ್ಯಂಡ್ ಮೆನ್ಸ್ಟ್ರುವಲ್ ನೀಡ್ಸ್’ ಹೆಸರಿನ ಈ ಯೋಜನೆಯಡಿ ಪ್ರಯಾಣದ ವೇಳೆ ಮಹಿಳೆಯರಿಗೆ ಕಡಿಮೆ ದರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಒದಗಿಸಲಾಗುತ್ತದೆ. ಬಳಕೆಯಾದ ನ್ಯಾಪ್ಕಿನ್‌ಗಳನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡಲು ಇನ್ಸಿನರೇಟರ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಮೊದಲ ಹಂತದಲ್ಲಿ ರಾಜ್ಯದ 14 ಜಿಲ್ಲೆಗಳ ತಲಾ ಒಂದು ಕೆಎಸ್‌ಆರ್‌ಟಿಸಿ ಬಸ್ ಟರ್ಮಿನಲ್‌ನಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ತಂಬಾನೂರು, ಕರುನಾಗಪ್ಪಳ್ಳಿ, ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಮುನ್ನಾರ್, ಎರ್ನಾಕುಳಂ ಸೆಂಟ್ರಲ್, ತ್ರಿಶ್ಯೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡು, ಮಾನಂತವಾಡಿ, ಕಣ್ಣೂರು ಮತ್ತು ಕಾಸರಗೋಡು ಬಸ್ ನಿಲ್ದಾಣಗಳಲ್ಲಿ ವೆಂಡಿಂಗ್ ಯಂತ್ರಗಳನ್ನು ಸ್ಥಾಪಿಸಲಾಗಿದೆ.
ಮುಂದಿನ ಹಂತದಲ್ಲಿ 93 ಕೆಎಸ್‌ಆರ್‌ಟಿಸಿ ಡಿಪೋಗಳಿಗೂ ಯೋಜನೆಯನ್ನು ವಿಸ್ತರಿಸಲಾಗುತ್ತದೆ. ಬಳಿಕ ಪ್ರವಾಸಿ ತಾಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಯೂ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಯಂತ್ರ ಮತ್ತು ಇನ್ಸಿನರೇಟರ್‌ಗಳನ್ನು ಸ್ಥಾಪಿಸಲಾಗುತ್ತದೆ. ಸರ್ಕಾರದ ನೂರು ದಿನಗಳ ಕ್ರಿಯಾ ಯೋಜನೆಯ ಭಾಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಕೆಎಸ್‌ಆರ್‌ಟಿಸಿ ಟರ್ಮಿನಲ್‌ಗಳ ಶೌಚಾಲಯಗಳ ಸಮೀಪದಲ್ಲಿ ವೆಂಡಿಂಗ್ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಒಂದು ಪ್ಯಾಕೆಟ್‌ನಲ್ಲಿ ಮೂರು ಸ್ಯಾನಿಟರಿ ನ್ಯಾಪ್ಕಿನ್‌ಗಳು ಇರಲಿದ್ದು, ರೂ.10 ದರ ನಿಗದಿಪಡಿಸಲಾಗಿದೆ. ಎಚ್‌ಎಲ್‌ಎಲ್ ಸಂಸ್ಥೆಯ ಸಹಕಾರದೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಯಂತ್ರಗಳ ನಿರ್ವಹಣೆಯನ್ನು ಕೆಎಸ್‌ಆರ್‌ಟಿಸಿ ವಹಿಸಿಕೊಳ್ಳಲಿದೆ.

0 Comments