ಮಂಜೇಶ್ವರ : ಕೇರಳ - ಕರ್ನಾಟಕ ಗಡಿ ಪ್ರದೇಶದ ಪ್ರತಿಭೆ, ಹೋಲಿಸ್ಟಿಕ್ ಹೀಲರ್, ಮಾಡೆಲ್ ಹಾಗೂ ಅಕಾನ್ಸಿಯಾ ಫೌಂಡೇಶನ್‌ನ ಸಂಸ್ಥಾಪಕಿ ಕ್ಷಮಾ ರವೀಂದ್ರ ಅವರು ‘ವುಮೆನ್ ಆಫ್ ಯೂನಿವರ್ಸ್–2026’ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಇದೀಗ ಪ್ರತಿಷ್ಠಿತ ‘ಸೋಶಿಯಲ್ ಆ್ಯಕ್ಟಿವಿಟಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನಡೆಯುತ್ತಿರುವ ‘Women of the Universe 2026’ ಸ್ಪರ್ಧೆಯಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಭಾರತವನ್ನು ಪ್ರತಿನಿಧಿಸಿರುವ ಕ್ಷಮಾ ರವೀಂದ್ರ ಅವರು ತಮ್ಮ ಪ್ರತಿಭೆ, ವ್ಯಕ್ತಿತ್ವ, ಸಾಮಾಜಿಕ ಬದ್ಧತೆ ಹಾಗೂ ಸೇವಾ ಮನೋಭಾವದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಮಂಜೇಶ್ವರದ ಉದ್ಯಾವರ ನಿವಾಸಿಗಳಾದ ರವೀಂದ್ರ ಕೆ.ಎಚ್. ಮತ್ತು ಕುಶಾಲ ಆರ್. ದಂಪತಿಯ ಪುತ್ರಿಯಾಗಿರುವ ಕ್ಷಮಾ ರವೀಂದ್ರ ಅವರು ಮಂಜೇಶ್ವರದಲ್ಲೇ ಹುಟ್ಟಿ ಬೆಳೆದವರು. ಉದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ ಅವರು, ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪಡೆದಿದ್ದಾರೆ.
ಬಿಎಸ್ಸಿ ಪದವೀಧರೆಯಾಗಿರುವ ಕ್ಷಮಾ ಅವರು ಬಳಿಕ ಸುಮಾರು 12 ವರ್ಷಗಳ ಕಾಲ ಜಿಸಿಸಿ ರಾಷ್ಟ್ರಗಳಲ್ಲಿ ವಾಸವಿದ್ದು, ವಿವಿಧ ಅನುಭವಗಳನ್ನು ಪಡೆದುಕೊಂಡ ನಂತರ ಮಂಗಳೂರಿಗೆ ಮರಳಿದ್ದಾರೆ. ಪ್ರಸ್ತುತ ಮಂಗಳೂರಿನ ಎಂಪೈರ್ ಮಾಲ್ ಕಟ್ಟಡದಲ್ಲಿ ‘ಸೋಲೋ ಹೀಲಿಂಗ್ ಸೆಂಟರ್’ ನಡೆಸುತ್ತಿದ್ದು, ಹೋಲಿಸ್ಟಿಕ್ ಹೀಲಿಂಗ್ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನದ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಅವರು ‘ಮಿಸೆಸ್ ಇಂಡಿಯಾ ಕ್ಲೀನ್ ಆಫ್ ಸಬ್‌ಸೈನ್ಸ್’ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಸ್ಥಾನ ಗಳಿಸುವ ಜೊತೆಗೆ ‘ಬ್ಯೂಟಿ ವಿದ್ ಪರ್ಪಸ್’ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಸೌಂದರ್ಯವನ್ನು ಕೇವಲ ಬಾಹ್ಯ ರೂಪಕ್ಕೆ ಸೀಮಿತಗೊಳಿಸದೆ, ಅದನ್ನು ಸಮಾಜಮುಖಿ ಉದ್ದೇಶ, ಮಾನವೀಯತೆ ಮತ್ತು ಸೇವೆಯೊಂದಿಗೆ ಜೋಡಿಸಿರುವುದು ಕ್ಷಮಾ ರವೀಂದ್ರ ಅವರ ವಿಶೇಷತೆ.
ಹೋಲಿಸ್ಟಿಕ್ ಹೀಲಿಂಗ್, ಎನರ್ಜಿ ಹೀಲಿಂಗ್, ಟ್ಯಾರೋ ಹಾಗೂ ಆಕಾಶಿಕ್ ರೆಕಾರ್ಡ್ ರೀಡಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಕ್ಷೇಮವನ್ನು ಸಮಗ್ರವಾಗಿ ನೋಡುವ ಪ್ರಯತ್ನ ಮಾಡುತ್ತಿದ್ದಾರೆ.
ಅವರ ನೇತೃತ್ವದ ‘ಅಕಾನ್ಸಿಯಾ ಫೌಂಡೇಶನ್’ ಭಾವನಾತ್ಮಕ ಕ್ಷೇಮ, ಆಂತರಿಕ ಸ್ವಾತಂತ್ರ್ಯ, ಕರುಣೆ ಹಾಗೂ ಜಾಗೃತ ಜೀವನಶೈಲಿಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಇದೀಗ ಅವರ ಸಾಮಾಜಿಕ ಸೇವಾ ಮನೋಭಾವ ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಮೂಡಿಸುವ ಪ್ರಯತ್ನಗಳನ್ನು ಗುರುತಿಸಿ ‘ವುಮೆನ್ ಆಫ್ ಯೂನಿವರ್ಸ್–2026’ ವೇದಿಕೆಯಲ್ಲಿ ‘ಸೋಶಿಯಲ್ ಆ್ಯಕ್ಟಿವಿಟಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಮಂಜೇಶ್ವರದ ಗಡಿ ಪ್ರದೇಶದಿಂದ ಆರಂಭವಾದ ಈ ಹೆಮ್ಮೆಯ ಪಯಣ ಇಂದು ದಕ್ಷಿಣ ಕೊರಿಯಾದ ಸಿಯೋಲ್‌ನ ಅಂತರರಾಷ್ಟ್ರೀಯ ವೇದಿಕೆಯವರೆಗೆ ತಲುಪಿದೆ.
ಸೌಂದರ್ಯದೊಂದಿಗೆ ಉದ್ದೇಶ, ಯಶಸ್ಸಿನೊಂದಿಗೆ ಸೇವೆ ಮತ್ತು ವ್ಯಕ್ತಿತ್ವದೊಂದಿಗೆ ಸಾಮಾಜಿಕ ಬದ್ಧತೆ ಎಂಬ ಸಂದೇಶವನ್ನು ಸಾರುತ್ತಿರುವ ಕ್ಷಮಾ ರವೀಂದ್ರ ಅವರ ಸಾಧನೆ ಮಂಜೇಶ್ವರ ಮಾತ್ರವಲ್ಲದೆ ಕಾಸರಗೋಡು ಹಾಗೂ ಇಡೀ ಕರಾವಳಿ ಭಾಗದ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ.


0 Comments