ಕಾಸರಗೋಡು : ನೀಲೇಶ್ವರ ರೈಲು ನಿಲ್ದಾಣದ ಪರಿಸರದಲ್ಲಿ ರೂ.25 ಲಕ್ಷ ಮೌಲ್ಯದ ಎಂಡಿಎಂಎ ಮಾದಕವಸ್ತು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಬಂಧಿತರನ್ನು ಮಂಜೇಶ್ವರ ತಾಲೂಕಿನ ಉಪ್ಪಳ ಸೋಂಕಾಲ್ ನಿವಾಸಿಗಳಾದ ಅಹ್ಮದ್ ರುಕ್ಷಾದ್ (33) ಮತ್ತು ಅಬ್ದುಲ್ ಹಮೀದ್ (30) ಎಂದು ಗುರುತಿಸಲಾಗಿದೆ. ಇವರಿಂದ 665.67 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು ರೂ.25 ಲಕ್ಷ ಎಂದು ಅಂದಾಜಿಸಲಾಗಿದೆ.
ದೆಹಲಿಯಿಂದ ಆಗಮಿಸುವ ಮಂಗಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಾದಕವಸ್ತು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ನೀಲೇಶ್ವರ ರೈಲು ನಿಲ್ದಾಣದಲ್ಲಿ ಇಳಿದು ರಸ್ತೆಯತ್ತ ತೆರಳುತ್ತಿದ್ದ ಆರೋಪಿಗಳನ್ನು ಅನುಮಾನಗೊಂಡ ಡ್ಯಾನ್‌ಸಾಫ್ ತಂಡ ಮತ್ತು ನೀಲೇಶ್ವರ ಪೊಲೀಸರು ತಡೆದು ವಿಚಾರಣೆ ನಡೆಸಿ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ರುಕ್ಷಾದ್‌ನ ಬ್ಯಾಗ್‌ನಲ್ಲಿದ್ದ ಟಿ-ಶರ್ಟ್‌ನೊಳಗೆ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿಡಲಾಗಿದ್ದ ಮಾದಕವಸ್ತು ಪತ್ತೆಯಾಗಿದೆ. ಆತನ ಬಳಿಯಿಂದ ರೂ.28,530 ನಗದನ್ನೂ ವಶಪಡಿಸಿಕೊಳ್ಳಲಾಗಿದೆ. ಎರಡನೇ ಆರೋಪಿ ಅಬ್ದುಲ್ ಹಮೀದ್‌ನ ಬ್ಯಾಗ್‌ನಲ್ಲಿ ಮಾದಕವಸ್ತುವನ್ನು ಅಳೆದು ಮಾರಾಟ ಮಾಡಲು ಬಳಸುವ ಡಿಜಿಟಲ್ ತೂಕದ ಯಂತ್ರ ಮತ್ತು ಗೂಗಲ್ ಪೇ ಸ್ಕ್ಯಾನರ್ ಕಾರ್ಡ್ ಪತ್ತೆಯಾಗಿದೆ.
ಆರೋಪಿಗಳ ಮೊಬೈಲ್ ಫೋನ್‌ಗಳು, ಪಾಸ್‌ಪೋರ್ಟ್ ಹಾಗೂ ಇತರ ಗುರುತಿನ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾದಕವಸ್ತು ಸಾಗಾಟದ ಹಿಂದಿರುವ ಜಾಲದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

0 Comments