ಕುಂಬಳೆ: ಅಂಗಡಿಮೊಗರು ಗ್ರಾಮದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೇ.6 ರಿಂದ 12ರ ವರೆಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪದಾಧಿಕಾರಿಗಳು ಶ್ರೀಕ್ಷೇತ್ರದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ.6 ರಂದು ಬೆಳಿಗ್ಗೆ 8ಕ್ಕೆ ಉಗ್ರಾಣ ಮುಹೂರ್ತ, 12.30ಕ್ಕೆ ಮಹಾಪೂಜೆ, ಪ್ರಸಾದ ಭೋಜನ ನಡೆಯಲಿದೆ. ಅಪರಾಹ್ನ 3 ರಿಂದ ಬಾಡೂರು ಶ್ರೀಕೃಷ್ಣ ಭಜನಾ ಮಂದಿರ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಸಂಜೆ 5.30ಕ್ಕೆ ತಂತ್ರಿವರ್ಯರ ಆಗಮನದೊಂದಿಗೆ ವೈದಿಕ ಕಾರ್ಯಕ್ರಮಗಳು ಆರಂಭಗೊಂಡು ಬ್ರಹ್ಮಕಲಶೋತ್ಸವಕ್ಕೆ ನಾಂದಿಯಾಗಲಿದೆ. ರಾತ್ರಿ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಉದ್ಘಾಟಿಸುವರು. ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಅಧ್ಯಕ್ಷತೆ ವಹಿಸುವರು. ವಿವಿಧ ವಲಯದ ಗಣ್ಯರು ಉಪಸ್ಥಿತರಿರುವರು. 7 ರಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ 4.30ಕ್ಕೆ ಎಡನೀರು ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರ ಆಗಮನ, ಧಾರ್ಮಿಕ ಸಭೆ ನಡೆಯಲಿದೆ. ಪ್ರಮುಖ ಗಣ್ಯರು ಭಾಗವಹಿಸುವ ಸಭೆಯಲ್ಲಿ ವೇ.ಮೂ.ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಭಾಷಣ ಮಾಡುವರು.
ಮೇ.8ರಂದು ಮಾಣಿಲ ಶ್ರೀಮೋಹನದಾಸ ಸ್ವಾಮೀಜಿ ಆಶೀರ್ವಚನದೊಂದಿಗೆ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀಕ್ಷೇತ್ರ ಕುಕ್ಕಾಜೆಯ ಶ್ರೀಕೃಷ್ಣ ಗುರೂಜಿ ಧಾರ್ಮಿಕ ಉಪನ್ಯಾಸ ನೀಡುವರು. ಪ್ರಮುಖ ಗಣ್ಯರು ಸಭೆಯಲ್ಲಿ ಉಪಸ್ಥಿತರಿರುವರು. ಮೇ.9ರಂದು ಸಂಜೆ 5 ರಿಂದ ಮಾತೃ ಸಂಗಮ ಜರಗಲಿದ್ದು, ಒಡಿಯೂರಿನ ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡುವರು. ಡಾ. ಆಶಾಜ್ಯೋತಿ ರೈ ಮಾಲಾಡಿ ಪ್ರಧಾನ ಭಾಷಣ ಮಾಡುವರು. ಮೇ. 10 ರಂದು ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನದೊಂದಿಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕಟೀಲಿನ ಡಾ.ಸೋಂದೆ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಮೇ.11 ರಂದು ಬೆಳಿಗ್ಗೆ 7.18ರ ವೃಷಭ ಲಗ್ನದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಸಹಿತ ಉಪದೇವತೆಗಳ ಪ್ರತಿಷ್ಠೆ, ಜೀವಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಅಂದು ಸಂಜೆ 3.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕ್ಷೇತ್ರ ಆಡಳಿತ ಮೊಕ್ತೇಸರ ವಕೀಲ ಇಚ್ಲಂಪಾಡಿ ಸುಬ್ಬಯ್ಯ ರೈ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅನುಗ್ರಹ ಭಾಷಣ ಮಾಡುವರು. ದೈನಂದಿನ ಸಾಂಸ್ಕೃತಿಕ, ಧಾರ್ಮಿಕ,ವೈದಿಕ ಸಮಾರಂಭಗಳೊಂದಿಗೆ ಬ್ರಹ್ಮಕಲಶೋತ್ಸವ ದೇಲಂಪಾಡಿ ಗ್ರಾಮಕ್ಕೆ ನವ ಚೇತನ ನೀಡಲಿದೆ.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾದ್ಯಕ್ಷ ಡಿ,.ದಾಮೋದರ, ಬ್ರಹ್ಮಕಲಶ-ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ರಾಜೇಂದ್ರ ರೈ, ಸ್ವಾಗತ ಸಮಿತಿ ಸಂಚಾಲಕ ಶಂಕರ ರೈ ಭಜನಾ ಸಮಿತಿ ಅಧ್ಯಕ್ಷ ಜಯರಾಮ ಬಿ, ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್ ಎಂ ಕುದ್ರೆಪ್ಪಾಡಿ, ಸಂಚಾಲಕರುಗಳಾದ ವಿನೀತ್ ಡಿ.ಕೆ, ವಿಖ್ಯಾತ್ ರೈ, ಸ್ವಯಂಸೇವಕ ಸಮಿತಿ ಸಂಚಾಲಕ ಉಮೇಶ್ ಮಂಟಪ್ಪಾಡಿ ಮೊದಲಾದವರು ಉಪಸ್ಥಿತರಿದ್ದು ಮಾಹಿತಿ ನೀಡಿದರು.
0 Comments