Ticker

6/recent/ticker-posts

ಅವಿರತ ಪ್ರಯತ್ನದ ಫಲಶ್ರುತಿ ; ಎಸ್‌ ಎಸ್ ಎಲ್ ಸಿ ಫಲಿತಾಂಶದಲ್ಲಿ ಹೊರಹೊಮ್ಮಿದ ಪೈವಳಿಕೆ ಕಾಯರ್ ಕಟ್ಟೆ ಶಾಲೆ ಸಾಧನೆ


ಪೈವಳಿಕೆ: ಕೇರಳ ರಾಜ್ಯ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಸರಕಾರಿ ಉನ್ನತ ಪ್ರೌಢಶಾಲೆ ಪೈವಳಿಕೆ ಕಾಯರ್ ಕಟ್ಟೆ  ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.ಗಡಿನಾಡಿನ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಕನ್ನಡ ಮಾಧ್ಯಮ ಶಾಲೆ ಉತ್ತಮ ಸಾಧನೆ ತೋರಿರುವುದು ನಿರಂತರ ಪ್ರಯತ್ನದ ಫಲಶ್ರುತಿ ಎನ್ನಲಾಗಿದೆ. ಕಳೆದ ಐದಾರು ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿ ಫಲಿತಾಂಶದಲ್ಲೂ ಹಿನ್ನಡೆ ಪಡೆದಿತ್ತು.ಒಂದು ಕಾಲದಲ್ಲಿ ಸಾವಿರಾರು ಕನ್ನಡ ವಿದ್ಯಾರ್ಥಿಗಳು ಕಲಿಯುತ್ತಿದ್ದ ಶಾಲೆಯಲ್ಲಿ ಸೌಕರ್ಯಗಳ ಕೊರತೆ ಹಾಗೂ ಇತರೆ ಕಾರಣಗಳಿಂದ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿತಗೊಂಡು ಗತಕಾಲದ ವೈಭವವನ್ನು ಕಳೆದುಕೊಳ್ಳುವ ಹಂತದಲ್ಲಿತ್ತು.ಇದೀಗ ಉತ್ತಮ ಫಲಿತಾಂಶದೊಂದಿಗೆ ಶಾಲೆ ಮತ್ತೆ ಮುನ್ನೆಲೆಗೆ ಬಂದಿದೆ.

ಶಾಲಾ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳ, ಊರ ವಿದ್ಯಾಭಿಮಾನಿಗಳ, ಹೆತ್ತವರ,ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಗಳ ನೇತೃತ್ವದಲ್ಲಿ ಕ್ರಿಯಾ ಸಮಿತಿಯೊಂದನ್ನು ರಚಿಸಲಾಗಿತ್ತು. ಶಾಲೆಗೆ ಹೆಚ್ಚಿನ ಮಕ್ಕಳನ್ನು ಆಕರ್ಷಿಸಲು ದಾಖಲಾತಿ ಹಾಗೂ ಫಲಿತಾಂಶವನ್ನು ಉತ್ತಮಪಡಿಸಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು.

ಕೇರಳ ರಾಜ್ಯ ಸರಕಾರವು ಕಿಪ್ಬೀ ಅನುದಾನದೊಂದಿಗೆ ಸುಸಜ್ಜಿತ ಹೊಸ ಕಟ್ಟಡವನ್ನು ನಿರ್ಮಿಸಿ ಶಾಲೆಯ ಸೌಕರ್ಯವನ್ನು ಒದಗಿಸಿತು. ಕರ್ನಾಟಕ ಸರಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರವು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತೆ ಸ್ಮಾರ್ಟ್ ಡಿಜಿಟಲ್ ಪ್ಯಾನೆಲ್ ಗಳನ್ನು ಒದಗಿಸಿ ವಿದ್ಯಾರ್ಥಿಗಳ ಕಲಿಕೆಗೆ ಹೈಟೆಕ್ ಸೌಕರ್ಯವನ್ನು ಒದಗಿಸಿದೆ. ಶಾಲಾ ಪಿಟಿಎ ಸಮಿತಿ ಪದಾಧಿಕಾರಿಗಳು ,ಅಧ್ಯಾಪಕರು ಮನೆ ಮನೆಗಳಿಗೆ ಭೇಟಿ ನೀಡಿ ಶಾಲೆಯ ಅಭಿವೃದ್ಧಿಗೆ ಬೇಕಾಗಿ ಮನವರಿಕೆಯನ್ನು ಮಾಡುವಲ್ಲಿ ಪ್ರಯತ್ನಿಸಿದ್ದಾರೆ.ಉತ್ತಮ ಕ್ರಿಯಾ ಯೋಜನೆಯ ಫಲವಾಗಿ ಶಾಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಗಣನೀಯವಾದ ಸಾಧನೆಯನ್ನು ಪಡೆದು ಹೊರಹೊಮ್ಮಿದೆ. ಈ ವರ್ಷ 32 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿನಿಗಳಾದ ಫಾತಿಮತ್ ಫಝ್ಮೀನ, ಆಸಿಯಾ ಅಲ್ಫಾ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದು ಸಾಧನೆ ತೋರಿದ್ದಾರೆ. 



ಇತರ ವಿದ್ಯಾರ್ಥಿಗಳು ಹೆಚ್ಚಿನ ವಿಷಯಗಳಲ್ಲಿ ಎ ಪ್ಲಸ್ ಪಡೆಯುವುದರ ಮೂಲಕ ಮಿಂಚಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಂಟನೇ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಪ್ರಾರಂಭಿಸಲು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಊರವರು ಅಧ್ಯಾಪಕರು ಹೆತ್ತವರು ವಿದ್ಯಾರ್ಥಿಗಳು ಪರಸ್ಪರ ಕೈಜೋಡಿಸಿದಾಗ ಶಾಲೆಯೊಂದರ ಅಭಿವೃದ್ಧಿಯಲ್ಲಿ ಉಂಟಾಗುವ ಬದಲಾವಣೆಗೆ ಕಾಯರ್ ಕಟ್ಟೆ ಸರಕಾರಿ ಕನ್ನಡ ಮಾಧ್ಯಮ ಶಾಲೆ ಒಂದು ಮಾದರಿಯಾಗಿ ಹೊರಹೊಮ್ಮಿದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು,ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ ವರ್ಗ, ಶಾಲಾ ರಕ್ಷಕ ಶಿಕ್ಷಕ ಸಂಘವು ಅಭಿನಂದಿಸಿದೆ.



ಜನಪ್ರತಿನಿಧಿಗಳ, ಊರವರ, ಹೆತ್ತವರ, ಅಧ್ಯಾಪಕರ, ಅಧ್ಯಾಪಕೇತರ ಸಿಬ್ಬಂದಿಗಳ, ವಿದ್ಯಾರ್ಥಿಗಳ ಪ್ರಯತ್ನದಿಂದ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಸರಕಾರದ ಒದಗಿಸಿದ ಹೊಸ ಕಟ್ಟಡ ಹಾಗೂ ಮೂಲಭೂತ ಸೌಕರ್ಯ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ನೀಡಿದ ಹೈಟೆಕ್ ಸೌಲಭ್ಯ ವಿದ್ಯಾರ್ಥಿಗಳ ಈ ಸಾಧನೆಗೆ ಪೂರಕವಾಗಿದೆ. ಕಳೆದ ಐದಾರು ವರ್ಷಗಳ ನಂತರ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ನಮ್ಮ ಇಬ್ಬರು ವಿದ್ಯಾರ್ಥಿಗಳು ಪಡೆದಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಂಟನೇ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಪ್ರಾರಂಭಿಸುತ್ತೇವೆ

-ಶ್ರೀಮತಿ ಭಾಗ್ಯಲಕ್ಷ್ಮಿ ಮುಖ್ಯೋಪಾಧ್ಯಾಯಿನಿ



ಪೈವಳಿಕೆ ಕಾಯರ್ ಕಟ್ಟೆ ಶಾಲೆಯು ಹಳೆಯ ಕಾಲದ ಕನ್ನಡ ಮಾಧ್ಯಮ ಸರಕಾರಿ ಶಾಲೆ. ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದ ಶಾಲೆಯಲ್ಲಿ ಕ್ರಮೇಣ ಮಕ್ಕಳ ಸಂಖ್ಯೆ ಕಡಿಮೆಯಾಗಿ ಗತಕಾಲದ ವೈಭವವನ್ನು ಕಳೆದುಕೊಳ್ಳುವ ಆತಂಕವಿತ್ತು.ನಮ್ಮ ಕನ್ನಡ ವಿದ್ಯಾರ್ಥಿಗಳು ತೋರಿದ ಸಾಧನೆಯು ಹೆಚ್ಚಿನ ವಿದ್ಯಾರ್ಥಿಗಳನ್ನು ಶಾಲೆಗೆ ಆಕರ್ಷಿಸಲು ಕಾರಣವಾಗಬಹುದು.ಈಗಾಗಲೇ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರವು ಶಾಲೆಗೆ ಸುಮಾರು 5 ಲಕ್ಷದ ಡಿಜಿಟಲ್ ಪ್ಯಾನೆಲ್ ಅನ್ನು ಒದಗಿಸಿದೆ. ಇದು ಮಕ್ಕಳ ಕಲಿಕೆಗೆ ಸಹಾಯಕವಾಗಿದೆ.

ಎ ಅರ್ ಸುಬ್ಬಯ್ಯಕಟ್ಟೆ

ಸದಸ್ಯರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು

Post a Comment

0 Comments