ಕರಾವಳಿ ಜಿಲ್ಲೆಯ ಕೊರಗ ಬುಡಕಟ್ಟು ಸಮುದಾಯದ ಯುವತಿಯೊಬ್ಬರು ಮೊತ್ತ ಮೊದಲ ಬಾರಿಗೆ ವೈದ್ಯಕೀಯ ಪದವಿ ಪಡೆದು ಸಾಧನೆ ಮಾಡುವ ಮೂಲಕ ತುಳುನಾಡಿನಾದ್ಯಂತ ಎಲ್ಲೆಡೆಯು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕುಂದಾಪುರ ತಾಲೂಕಿನ ಉಳ್ಳೂರು ನಿವಾಸಿ ಗಣೇಶ್ ವಿ. ಮತ್ತು ಜಯಶ್ರೀ ದಂಪತಿಯ ಹಿರಿಯ ಪುತ್ರಿ ಡಾ.ಕೆ.ಸ್ನೇಹಾ ಅವರು ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪೂರೈಸಿ ಈಗ ನ್ಯೂಡೆಲ್ಲಿ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಎಂಡಿ ಪದವಿ ಪಡೆಯುವ ಮೂಲಕ ಗುರುತಿಸಿಕೊಂಡಿದ್ದಾರೆ.
ಬಾಲ್ಯದಿಂದಲೂ ಕಲಿಕೆಯಲ್ಲಿ ಚುರುಕಾಗಿದ್ದ ಸ್ನೇಹಾ ಪ್ರಾಥಮಿಕ ಶಾಲೆಯನ್ನು ಅಂಕೋಲಾ, ಕುಂದಾಪುರ, ಹೆಬ್ರಿಯಲ್ಲಿ ಮುಗಿಸಿದರು. ಈಕೆಯ ಪ್ರತಿಭೆ ಗುರುತಿಸಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪಿಯುಸಿಗೆ ಉಚಿತವಾಗಿ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ್ದರು. ಪಿಯುಸಿಯಲ್ಲಿ ಶೇ.96 ಅಂಕ ಪಡೆದು ಸಿಇಟಿಯಲ್ಲಿ 2,264 ಅಂಕ ಗಳಿಸಿದ ಅವರಿಗೆ ಸರಕಾರಿ ಕೋಟಾದಲ್ಲಿ ಮೆಡಿಕಲ್ ಸೀಟು ದೊರೆಯಿತು. ಆದರೆ, ತಮ್ಮೂರಿನ ಹತ್ತಿರದಲ್ಲೇ ಕಲಿಕೆ ಮಾಡಬೇಕೆಂಬ ಹೆತ್ತವರ ಇಚ್ಛೆಯಂತೆ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿಗೆ ದಾಖಲಾದರು. ನ್ಯೂಡೆಲ್ಲಿ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಎಂಡಿ ಪದವಿ ಮುಗಿಸಿ ವೃತ್ತಿ ನಿರತರಾಗಿದ್ದಾರೆ.
ಪುತ್ರಿಯ ಸಾಧನೆ ಅತೀವ ಸಂತಸ ನೀಡಿದೆ. ನಮ್ಮ ಸಮುದಾಯದ ಮೊದಲ ವೈದ್ಯೆ ಎಂಬ ಹೆಗ್ಗಳಿಕೆ ಆಕೆ ಹೊತ್ತಿದ್ದಾಳೆ. ಹೊಸದಿಲ್ಲಿಗೆ ಹೋಗಿ ಎಂಡಿ ಪದವಿ ಗಳಿಸಿರುವುದು ಅತ್ಯಂತ ಸಂತೋಷದ ಕ್ಷಣ ಎಂದು ಸ್ನೇಹಾಳ ತಂದೆ ತಾಯಿ ಪ್ರತಿಕ್ರಿಯಿಸಿದ್ದಾರೆ.

0 Comments