Ticker

6/recent/ticker-posts

Ad Code

ಮಾರಕವಾಗಲಿದೆ ಮಂಜು : ಜನಜೀವನಕ್ಕೆ ಬಾಧಕ - ಹವಾಮಾನ ವರದಿ

 

ನವದೆಹಲಿ: ಉತ್ತರ ಭಾರತದಾದ್ಯಂತ ಶೀತಗಾಳಿ ತೀವ್ರವಾಗಿದ್ದು, ದಟ್ಟ ಮಂಜು ಗೋಚರಿಸಲಿದೆ. ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತೀವ್ರ ಶೀತಗಾಳಿ ಹಾಗೂ ದಟ್ಟವಾದ ಮಂಜಿನಿಂದಾಗಿ ಉತ್ತರ ಭಾರತದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಪ್ರದೇಶಗಳಲ್ಲಿ ಗೋಚರತೆ ಶೂನ್ಯಕ್ಕೆ ಇಳಿದಿದೆ. ಇದರಿಂದಾಗಿ ವಿಮಾನಗಳ ಹಾರಾಟ ಹಾಗೂ ರೈಲು ಸಂಚಾರದ ಮೇಲೆಯೂ ಪರಿಣಾಮ ಬೀರಿದೆ. ಉತ್ತರ ಭಾರತದಾದ್ಯಂತ ದಟ್ಟವಾದ ಮಂಜಿನಿಂದಾಗಿ ಸುಮಾರು 600 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, 100ಕ್ಕೂ ಹೆಚ್ಚು ರೈಲುಗಳು ವಿಳಂಬವಾಗಿದೆ. ದೆಹಲಿ ವಿಮಾನ ನಿಲ್ದಾಣವೊಂದರಲ್ಲಿಯೇ 128 ವಿಮಾನಗಳ ಪೈಕಿ 64 ಆಗಮನ ಮತ್ತು 64 ನಿರ್ಗಮನ ಹಾರಾಟ ರದ್ದಾಗಿದೆ. 470 ವಿಮಾನಗಳು ವಿಳಂಬವಾಗಿದೆ. ದೆಹಲಿಯಲ್ಲಿ ಮಾತ್ರವಲ್ಲದೇ ಮುಂಬೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಅಮೃತಸರ, ಚಂಡೀಗಢ, ಜೈಪುರ, ಡೆಹ್ರಾಡೂನ್, ಪಾಟ್ನಾ ಮತ್ತು ಭೋಪಾಲ್ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ.

 ದೆಹಲಿಯಲ್ಲಿ ವಂದೇ ಭಾರತ್, ಶತಾಬ್ದಿ, ರಾಜಧಾನಿ, ತೇಜಸ್ ಮತ್ತು ಸೂಪರ್‌ಫಾಸ್ಟ್ ರೈಲು ಸೇರಿದಂತೆ 100ಕ್ಕೂ ಹೆಚ್ಚು ರೈಲುಗಳ ಮೇಲೆ ಪರಿಣಾಮ ಬೀರಿದೆ. ಹಲವು ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಸಂಚರಿಸುತ್ತಿದ್ದು, ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ದೆಹಲಿ, ಲಕ್ನೋ, ಮೊರಾದಾಬಾದ್, ವಾರಣಾಸಿ ಮತ್ತು ಪ್ರಯಾಗ್‌ರಾಜ್ ವಿಭಾಗಗಳ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ರೈಲುಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯ ವ್ಯವಸ್ಥೆಗಳನ್ನು ಮಾಡಲು ಆದೇಶಿಸಿದ್ದಾರೆ. ಡಿಜಿಸಿಎ ಡಿಸೆಂಬರ್ 10ರಿಂದ ಫೆಬ್ರವರಿ 10 ರವರೆಗಿನ ಅವಧಿಯನ್ನು ಅಧಿಕೃತ ಮಂಜಿನ ಋತು ಎಂದು ಘೋಷಿಸಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಕೆಲವು ದಿನಗಳವರೆಗೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟವಾದ ಮಂಜು ಇರುತ್ತದೆ. ಆಗಾಗ ಹಗುರ ಮಳೆಯಾಗುವ ಸಾಧ್ಯತೆಯಿದೆ. ತಾಪಮಾನ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿರುತ್ತದೆ ಎಂದು ವರದಿ ಮಾಡಿದೆ.

Post a Comment

0 Comments