ಪೆರ್ಲ: ಬಜಕೂಡ್ಲಿನಲ್ಲಿರುವ ಮುಗೇರುಹಿತ್ಲು ತರವಾಡು ಮನೆಯ ಸುವರ್ಣ ಗೋತ್ರವರ್ಗದ ಕುಟುಂಬಸ್ಥರಿಗೆ ಸಂಬಂಧಪಟ್ಟ ಶ್ರೀ ಧೂಮಾವತಿ ದೈವದ ಗುಡಿ ಹಾಗೂ ಧರ್ಮದೈವ ಪಂಜುರ್ಲಿ ಹಾಗೂ ಪರಿವಾರ ದೈವಗಳ ತರವಾಡು ಮನೆಯ ಜೀರ್ಣೋದ್ಧಾರ ಪ್ರಕ್ರಿಯೆ ಬಹಳ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಕಳೆದ ಎಪ್ರಿಲ್ ಮೇ ತಿಂಗಳಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆ ಆರಂಭಗೊಂಡಿದ್ದು ಕುಟುಂಬಸ್ಥರ ಹಾಗೂ ಪರಿಸರ ನಿವಾಸಿಗಳ ಸಹಾಯ ಸಹಕಾರದಿಂದ ಕೆಲಸ ಕಾರ್ಯಗಳು ಭರದಿಂದ ಸಾಗಿದೆ. ಕಳೆದ ಹನ್ನೆರಡು ವರುಷಗಳಿಂದ ಲಕ್ಷ್ಮೀ ದೀಪದಲ್ಲಿ ಆರಾಧಿಸಿಕೊಂಡು ಬರುತ್ತಿರುವ ಶ್ರೀ ಧೂಮಾವತಿ ಅಮ್ಮನಿಗೆ ಶಾಶ್ವತವಾದ ಗುಡಿ ನಿರ್ಮಾಣವಾಗುತ್ತಿದ್ದು, ಅಮ್ಮನ ಪ್ರತಿರೂಪದ ನೇಮೋತ್ಸವವನ್ನು ಕಣ್ತುಂಬಿಕೊಳ್ಳಲು ಕುಟುಂಬಸ್ಥರೆಲ್ಲರೂ ಹಾತೊರೆಯುತ್ತಿದ್ದಾರೆ. ಹಲವಾರು ವರ್ಷಗಳ ಕನಸು ನನಸಾಗುವ ಸಂತಸದಲ್ಲಿ ಕುಟುಂಬದ ಬಂಧುಗಳೆಲ್ಲರೂ ತಮ್ಮಿಂದಾಗುವ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ. ಜೀರ್ಣೋದ್ಧಾರ ಕಾರ್ಯಗಳು ಸುಸೂತ್ರವಾಗಿ ನಡೆಯಲು ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದ್ದು ಶ್ರೀ ಸಂಕಪ್ಪ ಸುವರ್ಣ ಬಾಡೂರು ಅಧ್ಯಕ್ಷರಾಗಿ, ಶ್ರೀ ಜಯರಾಮ ಸುವರ್ಣ ಮಾಣಿಗೆ ಹಿತ್ತಿಲು ಕಾರ್ಯದರ್ಶಿಯಾಗಿ ಮತ್ತು ಶ್ರೀ ಜಗದೀಶ್ ಜೋಡುಕಲ್ಲು ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀ ಬಾಲಕೃಷ್ಣ ಪೂಜಾರಿ ಬಜಕೂಡ್ಲು ಅಧ್ಯಕ್ಷರು, ಶ್ರೀ ಸುನಿಲ್ ಮಾಸ್ತರ್ ವಿಷ್ಣು ನಗರ ಮುಂಡಿತ್ತಡ್ಕ ಪ್ರಧಾನ ಕಾರ್ಯದರ್ಶಿ ಮತ್ತು ಶ್ರೀ ಚಂದ್ರಶೇಖರ ನಡುಬೈಲ್ ಕೋಶಾಧಿಕಾರಿಯಾಗಿರುವ ಆಡಳಿತ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯು ಜಂಟಿಯಾಗಿ ಸಕಲ ಕಾರ್ಯ ಚಟುವಟಿಕೆಗಳ ಮೇಲ್ನೋಟ ವಹಿಸುತ್ತಿದೆ. ತರವಾಡಿನ ಪೂಜಾರಿವರ್ಯರಾದ ಸೋಂಪ ಪೂಜಾರಿ ಬೇರ್ಯ, ಹಿರಿಯರಾದ ತ್ಯಾಂಪು ಪೂಜಾರಿ ಗಡುವಾಡಿ, ಮುತ್ತು ಪೂಜಾರಿ ಪಂಜದಗುಡ್ಡೆ, ಕರಿಯಪ್ಪ ಪೂಜಾರಿ ಬಜಕೂಡ್ಲು, ಸೀತು ಕೆದುವಾರು ಇವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿವೆ. ಮುಂದಿನ ಎಪ್ರಿಲ್ ತಿಂಗಳಲ್ಲಿ ಪ್ರತಿಷ್ಠಾ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದ್ದು, ಆ ಪ್ರಯುಕ್ತ ಜ.4 ಆದಿತ್ಯವಾರದಂದು ಆಡಳಿತ ಸಮಿತಿಯ ವಿಶೇಷ ಮಹಾಸಭೆ ಮತ್ತು ಜೀರ್ಣೋದ್ಧಾರ ಸಮಿತಿಯ ತಿಂಗಳ ಅವಲೋಕನ ಸಭೆ ನಡೆಯಲಿದೆ.
0 Comments