ಮಂಜೇಶ್ವರ: ಕಲಿಯುಗದ ಕಾಮಧೇನು, ಕಲ್ಪವೃಕ್ಷ, ಅಪರೋಕ್ಷ ಜ್ಞಾನಿಗಳಾದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರು ವಿಶ್ವ ಮನುಕುಲದ ಒಳಿತಿಗಾಗಿ ವೃಂದಾವನಸ್ಥರಾದ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಮಠಕ್ಕೆ ತೆರಳಲು ಕಾಸರಗೋಡಿನಿಂದ ಮಂಗಳೂರು ದಾರಿಯಾಗಿ ಹಾಸನ, ರಾಯಚೂರು ಮೂಲಕ ಮಂತ್ರಾಲಯಕ್ಕೆ ರೈಲು ಸಂಚಾರ ಒದಗಿಸಿ ಕೊಡಬೇಕೆಂದು ಆಗ್ರಹಿಸಿ ರಾಯರ ಭಕ್ತರು ಮಂಜೇಶ್ವರ ವತಿಯಿಂದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೇಯ ಕರ್ನಾಟಕ ರಾಜ್ಯ ಸಚಿವರಾದ ವಿ. ಸೋಮಣ್ಣ ಮತ್ತು ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ಮನವಿ ನೀಡಿ ಲಕ್ಷಾಂತರ ಭಕ್ತರ ಅನುಕೂಲಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರಿಗೆ ದೇಶ, ವಿದೇಶಗಳಲ್ಲಿ ಲಕ್ಷಾಂತರ ಮಂದಿ ಪರಮ ಭಕ್ತರಿದ್ದು, ನಿತ್ಯ ರಾಯರನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ವರ್ಷಕ್ಕೊಮ್ಮೆ ಅಥವಾ ಇತರ ದಿನಗಳಲ್ಲಿ ರಾಯರ ವೃಂದಾವನಸ್ಥರಾದ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದಿವ್ಯ ಸನ್ನಿಧಿಗೆ ಭೇಟಿ ನೀಡಿ, ಶ್ರೀ ದೇವರ ದರ್ಶನ, ಪೂಜೆ ಪುನಸ್ಕಾರ ಸಲ್ಲಿಸಿ ಹಿಂತಿರುಗುತ್ತಿದ್ದಾರೆ. ಕಾಸರಗೋಡಿನಿಂದ ಮಂತ್ರಾಲಯಕ್ಕೆ ತೆರಳಲು ಮಂಗಳೂರಿನಿಂದ ಖಾಸಗಿ ಹಾಗೂ ಕರ್ನಾಟಕ ರಾಜ್ಯ ಸಾರಿಗೆಯ ಬಸ್ ಅಥವಾ ಬೆಂಗಳೂರು / ಹಾಸನಕ್ಕೆ ತೆರಳಿ ಅಲ್ಲಿಂದ ರೈಲನ್ನೇರಿ ಮಂತ್ರಾಲಯಕ್ಕೆ ತೆರಳಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಇದು ಪ್ರತಿಯೊಬ್ಬರಿಗೂ ಕೂಡಾ ದುಬಾರಿ ಬೆಲೆಯ ಟಿಕೆಟ್ ಹಾಗೂ ಸಮಯ ವ್ಯರ್ಥವನ್ನು ಕೂಡಾ ಮಾಡಿಕೊಡುತ್ತಿದೆ. ಅಲ್ಲದೆ ಗಂಟೆ ಗಟ್ಟಲೆ ಸಮಯ ಬಸ್ ನಲ್ಲೇ ಕಳೆಯಬೇಕಾಗುತ್ತದೆ. ಅಲ್ಲದೆ ಬಸ್ ನಲ್ಲಿ ಪ್ರಯಾಣಿಸುವ ಮಹಿಳೆ, ಮಕ್ಕಳಿಗೆ ಶೌಚಾಲಯದ ಸಮಸ್ಯೆ ಬಹುದೊಡ್ಡದಾಗಿ ಅನುಭವಕ್ಕೆ ಬರುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಹಾಗೂ ಮಂಗಳೂರು, ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಕ್ಷಾಂತರ ಮಂದಿ ರಾಯರ ಭಕ್ತರಿದ್ದು, ಇವರೆಲ್ಲರ ಅನುಕೂಲಕ್ಕೆ ತಕ್ಕಂತೆ ಕಾಸರಗೋಡಿನಿಂದ ಮಂಗಳೂರು - ಹಾಸನ - ರಾಯಚೂರು - ಮಂತ್ರಾಲಯಕ್ಕೆ ನಿತ್ಯ ಸಂಜೆ ವೇಳೆ ರೈಲು ಸಂಚಾರ ಒದಗಿಸಿದಲ್ಲಿ ಲಕ್ಷಾಂತರ ಮಂದಿ ರಾಯರ ಭಕ್ತರಿಗೆ ಕ್ಷೇತ್ರ ಸಂದರ್ಶನಕ್ಕೆ ಹಾಗೂ ಪ್ರಯಾಣದ ವೇಳೆ ಮೂಲಭೂತ ಸೌಕರ್ಯಕ್ಕೂ ಅನುಕೂಲವಾಗುತ್ತದೆ. ಅಲ್ಲದೆ ಉದ್ಯೋಗ ನಿಮಿತ್ತ ಕಾಸರಗೋಡಿನಿಂದ ದಕ್ಷಿಣ ಭಾರತದ ಪ್ರಮುಖ ನಗರವಾದ ಹೈದರಾಬಾದ್ ನ್ನು ಕೂಡಾ ಮಂತ್ರಾಲಯದ ಮೂಲಕ ಶೀಘ್ರವಾಗಿ ಸಂಪರ್ಕಿಸಲು ಸಾಧ್ಯವಾಗಲಿದೆ. ಮಂಗಳೂರು - ಹಾಸನ ರೈಲು ಮಾರ್ಗ ಪುನರಾರಂಭವಾದ ಮೇಲೆ ಮಂಗಳೂರಿನಿಂದ ದಕ್ಷಿಣ ಭಾರತದ ವಿವಿಧೆಡೆಗೆ ರೈಲು ಸಂಪರ್ಕ ಉತ್ತಮಗೊಂಡಿದೆ. ಆದರೆ ದಕ್ಷಿಣ ಭಾರತದ ಪ್ರಮುಖ ನಗರವಾದ ಹೈದರಾಬಾದ್ ಗೆ ಕರಾವಳಿಯಿಂದ ಶೀಘ್ರ ಹಾಗೂ ನೇರ ರೈಲು ಸಂಪರ್ಕವಿಲ್ಲದಿರುವುದು ಇನ್ನೊಂದೆಡೆ ಒಂದು ಮುಖ್ಯ ಕೊರತೆಯಾಗಿದೆ. ಇರುವ ಒಂದು ಸಾಪ್ತಾಹಿಕ ರೈಲು ಕೇರಳ ಹಾಗೂ ತಮಿಳುನಾಡು ಮಾರ್ಗದಲ್ಲಿ ಸುತ್ತಿ ಬಳಸಿ ದೀರ್ಘಾವಧಿಯಲ್ಲಿ ಸಾಗುತ್ತಿದೆ. ಅದು ಕರಾವಳಿಗರಿಗೆ ಹೆಚ್ಚು ಪ್ರಯೋಜನವಾಗುತ್ತಿಲ್ಲ. ಹಾಗಾಗಿ, ಕಾಸರಗೋಡಿನಿಂದ ಮಂಗಳೂರು, ಹಾಸನ, ಚಿತ್ರದುರ್ಗ, ಬಳ್ಳಾರಿ, ಮಂತ್ರಾಲಯ, ರಾಯಚೂರು, ಚಿತ್ತಾಪುರ ಮಾರ್ಗದಲ್ಲಿ ಹೈದರಾಬಾದ್‌ಗೆ ಹೊಸ ರೈಲು ಓಡಿಸಿದರೆ ಕನ್ನಡಿಗರಿಗೆ ಹೆಚ್ಚು ಅನುಕೂಲವಾಗುತ್ತದೆ. ಇದರಿಂದ ಉತ್ತರ ಹಾಗೂ ಕರ್ನಾಟಕದವರಿಗೆ ಧಾರ್ಮಿಕ, ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯಕ್ಕೆ ಕರಾವಳಿಗೆ ಬರಲು ಅನುಕೂಲ. ಹಾಗೆಯೇ ಪ್ರವಾಸಿ ಹಾಗೂ ತೀರ್ಥಕ್ಷೇತ್ರಗಳಾದ ಚಿತ್ರದುರ್ಗ, ಹಂಪಿ, ಮಂತ್ರಾಲಯ, ಹೈದರಾಬಾದ್‌ಗೆ ಕರಾವಳಿಯಿಂದ ನೇರ ಹಾಗೂ ಶೀಘ್ರ ಸಂಪರ್ಕ ದೊರೆಯುವಂತಾಗುತ್ತದೆ. ಸದ್ಯ ಹಾಸನದಿಂದಲೂ ಹೈದರಾಬಾದ್ ನೇರ ರೈಲು ಸಂಪರ್ಕವಿಲ್ಲ. ಇದರಿಂದ ಆ ಭಾಗಕ್ಕೂ ಅನುಕೂಲವಾಗಲಿದೆ. ಕಾಸರಗೋಡಿನಿಂದ ಮಂಗಳೂರು ಮೂಲಕ ಮಂತ್ರಾಲಯ, ಹೈದರಾಬಾದ್ ಗೆ ರೈಲು ಆರಂಭಿಸುವ ಬಗ್ಗೆ ರೈಲ್ವೆ ಸಚಿವರು, ಮಂಗಳೂರು ಸಂಸದರು ಆಸಕ್ತಿ ತೋರಿ, ಈ ದಾರಿಯಲ್ಲಿ ರೈಲು ಸಂಚಾರ ಆರಂಭಗೊಂಡಲ್ಲಿ ಲಕ್ಷಾಂತರ ಮಂದಿ ರಾಯರ ಭಕ್ತರಿಗೆ ಅನುಕೂಲ ಮಾಡಿದಂತಾಗುತ್ತದೆ ಅಲ್ಲದೇ ರಾಯರ ಸಂಪೂರ್ಣ ಅನುಗ್ರಹ ಕೂಡಾ ದೊರೆಯಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕೇಂದ್ರ ರೈಲ್ವೇ ಸಚಿವರಿಗೆ ಮಿಂಚಂಚೆ ಮೂಲಕ ಮನವಿ ನೀಡಲಾಗಿದ್ದು, ಮಂಗಳೂರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರನ್ನ ಮಂಜೇಶ್ವರದ ರಾಯರ ಭಕ್ತರ ನಿಯೋಗ ಮುಖತಃ ಭೇಟಿಯಾಗಿ ಮನವಿ ನೀಡಲಾಯಿತು. 'ರಾಯರ ಭಕ್ತರು ಮಂಜೇಶ್ವರ' ಸಂಸ್ಥಾಪಕರಾದ ಪತ್ರಕರ್ತ ರತನ್ ಕುಮಾರ್ ಹೊಸಂಗಡಿ, ರಾಜೇಶ್ ಕಡಂಬಾರು, ಸಾಮಾಜಿಕ ಮುಂದಾಳುಗಳಾದ ಅವಿನಾಶ್ ಹೆಗ್ಡೆ ಮಂಜೇಶ್ವರ, ಪುರೋಹಿತ ಯಾದವ ಶರ್ಮಾ ಮಂಗಳೂರು, ದಿನ್ ರಾಜ್ ಪ್ರತಾಪನಗರ, ದೀಪಕ್ ರಾಜ್ ಉಪ್ಪಳ, ಅನಿಲ್ ಕುಮಾರ್ ಕೊಡ್ಲಮೊಗರು ಭೇಟಿ ನೀಡಿ ಮನವಿ ನೀಡಿದ ನಿಯೋಗದಲ್ಲಿದ್ದರು.

0 Comments