ಪುತ್ತೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಕಾಲೇಜೊಂದರ ದೈಹಿಕ ಶಿಕ್ಷಕನಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪುತ್ತೂರು ನಿವಾಸಿ ಕಾಲೇಜೊಂದರ ದೈಹಿಕ ಶಿಕ್ಷಕ ಎಲಿಯಾಸ್ ಪಿಂಟೋ ಅದೇ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾದ ಸಂತ್ರಸ್ತೆ ಅಪ್ರಾಪ್ತ ಬಾಲಕಿಯು ಸ್ಪೋರ್ಟ್ಸ್ ಪ್ರಾಕ್ಟಿಸ್‌ಗೆ ಬಂದು ಒಂದು ರೌಂಡ್ ಓಡಿ ಜಿಮ್ ಕೊಠಡಿಯ ವರಾಂಡದಲ್ಲಿ ನಿಂತುಕೊಂಡಿದ್ದ ಸಮಯ ಬಾಲಕಿಯಲ್ಲಿ ನೀನು ಯಾಕೆ ಪ್ರಾಕ್ಟಿಸ್‌ಗೆ ಹೋಗಿಲ್ಲಾ ಎಂದು ಕೇಳಿದಾಗ ಬಾಲಕಿಯು ನನಗೆ ಸೊಂಟ ನೋವು ಇದ್ದುದರಿಂದ ಪ್ರಾಕ್ಟಿಸ್ ಮಾಡುವುದಿಲ್ಲ ಎಂದು ಹೇಳಿದ್ದರು. ಆರೋಪಿ ಎಲಿಯಾಸ್ ಪಿಂಟೋ ಬಾಲಕಿಯನ್ನು ಮಾತನಾಡಿಸಿಕೊಂಡು ಕೊಠಡಿಗೆ ಕರೆದುಕೊಂಡು ಹೋಗಿ ಮೈಯನ್ನು ಮುಟ್ಟಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಮಾನಭಂಗವನ್ನುಂಟು ಮಾಡಿದ್ದ. 2021 ಒಕ್ಟೋಬರ್ 23ರಂದು ಈ ಪ್ರಕರಣ ನಡೆದಿದ್ದು ಬಾಲಕಿಯು ನೀಡಿದ ದೂರಿನ ಮೇರೆಗೆ ದ.ಕ. ಮಹಿಳಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಒಟ್ಟು 19 ಸಾಕ್ಷಿಗಳನ್ನು ವಿಚಾರಿಸಿದೆ. ಬಾಲಕಿ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ಸವಿವರವಾದ ಹೇಳಿಕೆ ನೀಡಿರುತ್ತಾರೆ. ದ.ಕ.ಮಹಿಳಾ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕರವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬಗ್ಗೆ ವಿವರವಾದ ಸಾಕ್ಷ್ಯ, ನೀಡಿರುತ್ತಾರೆ. ನ್ಯಾಯಾಧೀಶೆ ಸರಿತಾ ಡಿ. ಅವರು ಇತ್ತಂಡಗಳ ವಾದ ಆಲಿಸಿ ಆರೋಪಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಸರಕಾರದ ಪರ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಕುದ್ರಿಯ ಪುಷ್ಪರಾಜ ಅಡ್ಯಂತಾಯರವರು ವಾದಿಸಿದ್ದರು.

0 Comments