ಬದಿಯಡ್ಕ ಕುಂಬ್ಡಾಜೆ ಪಂಚಾಯತ್ ನ ಮೌವ್ವಾರು ಶಾಲಾ ಬಳಿಯ ಅಜಿಲ ಎಂಬಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪುಷ್ಪಲತಾ ವಿ.ಶೆಟ್ಟಿ ಪ್ರಕರಣ ಕೊಲೆ ಎಂದು ಸ್ಪಷ್ಟಗೊಂಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ಧೆಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆಗೈದ ಪ್ರಕರಣದಲ್ಲಿ ರಮೇಶ್ ನಾಯ್ಕ್ ಎಂಬಾತ ಆರೋಪಿಯಾಗಿದ್ದು ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಕೊಲೆಯಾದ ಪುಷ್ಪಲತಾ ವಿ.ಶೆಟ್ಟಿ ಕತ್ತಿನಲ್ಲಿದ್ದ ನಾಲ್ಕು ಪವನ್ ತೂಕದ ಕರಿಮಣಿ ಸರ ಪಡೆಯಲು ಕೊಲೆ ಮಾಡಿರುವುದಾಗಿ ಬಂಧಿತ ವ್ಯಕ್ತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಶುಕ್ರವಾರ ಮಧ್ಯಾಹ್ನ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಕತ್ತು ಹಿಸುಕಿ ಮೂಗು ಮುಚ್ಚಿಕೊಂಡು ಕೊಲೆ ಮಾಡಿರುವುದು ಸ್ಪಷ್ಟವಾಗಿದೆ. ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಪುಷ್ಪಲತಾ ವಿ ಶೆಟ್ಟಿ ಗುರುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.ಪುಷ್ಪಲತಾ ಅವರ ಮುಖಕ್ಕೆ ಪರಚಿದ ಗಾಯ ಹಾಗೂ ಸ್ಥಳದಲ್ಲಿ ರಕ್ತದ ಕಲೆಗಳು, ಎಳೆದಾಡಿದ ಕುರುಹುಗಳು ಪತ್ತೆಯಾಗಿದ್ದು
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿತ್ತು. ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದಾಗ ಮರಣೋತ್ತರ ಪರೀಕ್ಷೆಯನ್ನು ಪರಿಯಾರಂಗೆ ಸ್ಥಳಾಂತರಿಸಲಾಯಿತು. ಇದರಂತೆ ರಮೇಶ್ ನಾಯ್ಕ್ ನನ್ನು ಶಂಕಿತ ಆರೋಪಿಯನ್ನಾಗಿಸಿ ತನಿಖೆಗೊಳಪಡಿಸಲಾಗಿತ್ತು.

0 Comments