ಬದಿಯಡ್ಕ: ಚೆರ್ಕಳ-ಕಲ್ಲಡ್ಕ ಅಂತರರಾಜ್ಯ ಮಾರ್ಗದಲ್ಲಿ ಚೆರ್ಕಳದಿಂದ ಉಕ್ಕಿನಡ್ಕದವರೆಗಿನ ರಸ್ತೆಯ ಶೋಚನೀಯ ಸ್ಥಿತಿಯನ್ನು ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳದಿದ್ದರೆ ಜ.19 ರಿಂದ ಅನಿರ್ದಿಷ್ಟಾವಧಿ ಬಸ್ ಮುಷ್ಕರ ನಡೆಸಲಾಗುವುದು ಎಂದು ಪ್ರೈಡ್ ಬಸ್ ವರ್ಕರ್ಸ್ ಯೂನಿಯನ್ ಪ್ರಾದೇಶಿಕ ಅಧ್ಯಕ್ಷ ಹ್ಯಾರಿಸ್ ಪಿ.ಎಂ.ಎಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ರಸ್ತೆಯಲ್ಲಿ ಚೆರ್ಕಳ-ಉಕ್ಕಿನಡ್ಕ ನಡುವಿನ 19 ಕಿ.ಮೀ. ರಸ್ತೆ ಒಂದು ವರ್ಷದಿಂದ ಗುಂಡಿಗಳಿಂದ ತುಂಬಿದೆ. ವಾಹನಗಳು ಗುಂಡಿಗಳಿಗೆ ಹಾರಿ ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರಿಗೆ ತೀವ್ರ ಗಾಯ ನೋವುಗಳುಂಟು ಮಾಡುತ್ತಿದೆ. ಬಸ್ ಒಳಗೆ ಪ್ರಯಾಣಿಕರು ಬಿದ್ದು ಗಾಯಗೊಂಡಿದ್ದಾರೆ. ಪ್ರತಿದಿನ ದುರಸ್ತಿಗಾಗಿ ಬಸ್‌ಗಳನ್ನು ಗ್ಯಾರೇಜ್ ಗೆ ಕೊಂಡೊಯ್ಯಬೇಕಾಗುತ್ತದೆ. ದ್ವಿಚಕ್ರ ವಾಹನಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಈ ಮಾರ್ಗದಲ್ಲಿ ಅಪಘಾತಗಳು ನಡೆಯದ ಒಂದು ದಿನವೂ ಕಳೆದಿಲ್ಲ. ಸಣ್ಣ ವಾಹನಗಳ ಪರಿಸ್ಥಿತಿಯೂ ಇದಕ್ಕಿಂತ ಹೀನಾಯವಾಗಿದೆ. ರಸ್ತೆ ನಿರ್ಮಾಣವಾದ ಬಳಿಕ ಐದು ವರ್ಷಗಳ ಸಮಯದಲ್ಲಿ ಸಂಭವಿಸಿದ ಯಾವುದೇ ಹಾನಿಯನ್ನು ಗುತ್ತಿಗೆದಾರರು ಸರಿಮಾಡಿಸಲಿಲ್ಲ. ರಸ್ತೆಯ ನಿರ್ಮಾಣದ ಸಮಯದಲ್ಲಿ ಅದರ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳದ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರು ಹೆದರುತ್ತಾರೆಯೇ ಎಂಬುದು ಅನುಮಾನಾಸ್ಪದವಾಗಿದ್ದು. ತಪ್ಪಿತಸ್ಥ ನೌಕರರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಹ್ಯಾರಿಸ್ ಜಿಲ್ಲಾಧಿಕಾರಿ ಮತ್ತು ಕೆಐಐಎಫ್‌ಬಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

0 Comments