ಪುತ್ತೂರು: ಕಡಬ ಸಮೀಪದ ರಾಮಕುಂಜದಲ್ಲಿ ಗುಂಡೇಟಿನಿಂದ ಬಾಲಕ ಮೃತ ಪಟ್ಟ ಪ್ರಕರಣ ಇನ್ನೂ ನಿಗೂಢವಾಗಿದ್ದು ಈ ನಡುವೆ ಬಾಲಕನ ತಾಯಿ ಸಲ್ಲಿಸಿದ ದೂರು ಗಂಭೀರತೆಯನ್ನು ಸೃಷ್ಟಿಸಿದೆ. ಜನವರಿ 24 ರ ಸಂಜೆ ರಾಮಕುಂಜ ಗ್ರಾಮದ ಪಾದೆಯಲ್ಲಿ ಕೋವಿಯ ಗುಂಡೇಟು ತಗಲಿ ಹದಿಹರೆಯದ ಬಾಲಕ ಮೋಕ್ಷ್ ಮೃತಪಟ್ಟಿದ್ದ. ಈತನ ತಂದೆ ಚೂರಿ ಇರಿತದ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 25 ರಂದು ಕಾಸರಗೋಡಿನ ಪೆರ್ಲದ ಎಣ್ಮಕಜೆಯಲ್ಲಿರುವ ಅವನ ತಾಯಿಯ ಮನೆಯಲ್ಲಿ ಬಾಲಕನ ಅಂತ್ಯಕ್ರಿಯೆ ನಡೆಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ತಂದೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣದ ಬಗ್ಗೆ ಬಾಲಕನ ತಾಯಿ ಜಯಶ್ರೀ ತಮ್ಮ ಪತಿ ವಸಂತ್ ಅಮೀನ್ ತಮ್ಮ ಮಗ ಮೋಕ್ಷನನ್ನು ಕೊಂದಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ಕೌಟುಂಬಿಕ ಕಲಹದ ನಂತರ, ಮೋಕ್ಷ ತನ್ನ ತಂದೆ ವಸಂತ್ ಅಮೀನ್ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು, ನಂತರ ತಂದೆಯ ಹೆಸರಿನಲ್ಲಿ ಪರವಾನಗಿ ಪಡೆದಿದ್ದ SBBL ಬಂದೂಕಿನಿಂದ ಮುಖಕ್ಕೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಉಲ್ಲೇಖಿಸಲಾಗಿತ್ತು. ಆದರೆ ತಾಯಿ ಸಲ್ಲಿಸಿದ ದೂರು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪ್ರಕರಣದ ಸುತ್ತಲಿನ ಗೊಂದಲವನ್ನು ಹೆಚ್ಚಿಸಿದೆ. ಬಾಲಕನ ಸಾವಿಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳು ಸಹಜವಾಗಿಯೇ ನಾಗರಿಕರಲ್ಲಿ ಉದ್ಭವಿಸಿದ್ದು ತಂದೆಯ ವಶದಲ್ಲಿದ್ದ ಕೋವಿಗೆ ಗುಂಡು ತುಂಬಿಸಿರುವುದು ಯಾರು? ಮುಂಚಿತವಾಗಿಯೇ ತುಂಬಿಸಿಟ್ಟಿರುವುದಾದರೆ ಯಾಕಾಗಿ ? ತಂದೆಯ ವಶದಲ್ಲಿದ್ದ ಕೋವಿ ಗುಂಡುಗಳು ಮೃತ ಮೋಕ್ಷ್ ಗೆ ಸುಲಭದಲ್ಲಿ ಸಿಗಲು ಸಾಧ್ಯವೇ. ಸಾವಿಗಿಂತ ಮುಂಚಿತ ಅಮ್ಮನಿಗೆ ಕರೆ ಮಾಡಿ ಅಜ್ಜಿ ಮನೆಗೆ ಬರುತ್ತೇನೆಂದು ಒಪ್ಪಿಕೊಂಡಿದ್ದ ಮೋಕ್ಷ ದಿಢೀರನೆ ಸಾವನ್ನಪ್ಪಲು ಕಾರಣವೇನೆಂಬುದು ಇನ್ನೂ ನಿಗೂಢವಾದ ಪ್ರಶ್ನೆಗಳಾಗಿವೆ. ಪೊಲೀಸ್ ತನಿಖೆಯ ನಂತರವೇ ಸಂಪೂರ್ಣ ಸತ್ಯ ಹೊರಬರುವ ನಿರೀಕ್ಷೆಯಿದೆ.

0 Comments