ಕುಂಬಳೆ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕುಂಬಳೆ ಸಮೀಪದ ಆರಿಕ್ಕಾಡಿಯಲ್ಲಿ ಸ್ಥಾಪಿಸಿದ ಟೋಲ್ ಗೇಟ್ ವಿವಾದ ನಡುವೆಯೆ ಟೋಲ್ ಸಂಬಂಧ ಬುಧವಾರ ಹೈಕೋರ್ಟು ಟೋಲ್ ವಿರೋಧಿ ಕ್ರಿಯಾ ಸಮಿತಿ ನೀಡಿದ ದೂರಿನ ಮೇರೆಗೆ ಅಂತಿಮ ತೀರ್ಪು ನೀಡಬೇಕಿತ್ತು. ಆದರೆ ರಾ. ಹೆದ್ದಾರಿ ಪ್ರಾಧಿಕಾರದ ಪರವಾಗಿ ಹಾಜರಾಗಲೇ ಬೇಕಿದ್ದ ವಕೀಲರು ಕೇಸಿಗೆ ಸಂಬಂಧಿಸಿ ಹಾಜರಾಗದೇ ಇದ್ದ ಹಿನ್ನೆಲೆಯಲ್ಲಿ ಹೈಕೋರ್ಟು ಕೇಸು ಪರಿಗಣಿಸದೇ ಫೆ. 11ಕ್ಕೆ ಮುಂದೂಡಿತ್ತು. ಪ್ರಸ್ತುತ ಕೇಸಿನ ಅಂತಿಮ ತೀರ್ಪು ನೀಡುವ ಮುನ್ನವೇ ಬುಧವಾರ ಪೋಲಿಸ್ ಸನ್ನಾಹದೊಂದಿಗೆ ಅಧಿಕೃತವಾಗಿ ಸಾರ್ವಜನಿಕ ವಾಹನಗಳಿಗೆ ಟೋಲ್ ವಿಧಿಸಲು ಆರಂಭಿಸಿರುವುದು ನಾಗರಿಕ ವಿರೋಧಕ್ಕೆ ಕಾರಣವಾಗಿದೆ.ಈ ಸಂದರ್ಭ ಪ್ರತಿಭಟಿಸಿದವರನ್ನು ಪೊಲೀಸ್ ಸೇನೆ ಬಳಸಿ ಕ್ರಿಮಿನಲ್ ಅಪರಾಧಿಗಳಂತೆ ಎತ್ತಿ ಕೊಂಡೊಯ್ದ ನಾಟಕೀಯ ಘಟನೆಯು ನಡೆದಿತ್ತು. ಈ ನಡುವೆ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಸಿ.ಎ.ಸುಬೈರ್, ಆಶ್ರಫ್ ಕಾರ್ಲೆ ಮೊದಲಾದವರು ಸ್ಥಳಕ್ಕೆ ತಲುಪಿ ಅಧಿಕೃತರೊಡನೆ ಮಾತುಕತೆಗಿಳಿದಾಗ ಸಂಘರ್ಷವಸ್ಥೆ ಸೃಷ್ಟಿಯಾಗಿತ್ತು. ಈ ನಡುವೆ ರಾತ್ರಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿಯೇ ಕ್ರಿಯಾ ಸಮಿತಿ ಪದಾಧಿಕಾರಿಗಳು ಹಿಂತಿರುಗಿದ್ದರು.
ವಿವಾದತ್ಮಕ ಟೋಲ್ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕರು ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೆ ಮಂಡಿಸಿದ್ದರೂ. ಸರಕಾರ ಮತ್ತೊಮ್ಮೆ ಕೇಂದ್ರವನ್ನು ಭಿನ್ನವಿಸುವ ಭರವಸೆ ನೀಡಿತ್ತು. ಅದರ ಬೆನ್ನಲ್ಲೇ ಕುಂಬಳೆಯಲ್ಲಿ ಟೋಲ್ ವಸೂಲಿ, ಪೋಲೀಸರ ದೌರ್ಜನ್ಯ ನಡೆದಿದೆ. ಇದನ್ನು ಖಂಡಿಸಿ ಗುರುವಾರ ಸಂಜೆ ಕುಂಬಳೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

0 Comments