ಕುಂಪಲ : ಸಾಮಾಜಿಕ ಜಾಲತಾಣವನ್ನು ಎಷ್ಟರ ಮಟ್ಟಿಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಕುಂಪಲ-ಬೈಪಾಸಿನ ನೂತನ ಡಿಮಾರ್ಟ್ ನಲ್ಲಿ ಉದ್ಯೋಗಾವಕಾಶದ ನಕಲಿ ಜಾಹೀರಾತು ಹರಿಯಬಿಟ್ಟ ಬೆಳವಣಿಗೆಯೇ ನಿದರ್ಶನ. ಜಾಲತಾಣಗಳಲ್ಲಿ ಇಂತಹ ಕಂಟೆಂಟ್ ಗಳನ್ನು ಸೃಷ್ಟಿಸಿ ಹರಿಯ ಬಿಟ್ಟವರಿಗೆ ಮನಸ್ಸಿಗೆ ಒಂದಷ್ಟು ವಿಘ್ನ ಸಂತೋಷ ಲಭಿಸಬಹುದು. ಆದರೆ ಇಂತಹ ಸುಳ್ಳು ಜಾಹಿರಾತುಗಳನ್ನೇ ನಂಬಿ ಕೆಲಸ ಅರಸಿ ಬಂದವರ ಮತ್ತು ಇದನ್ನೇ ಸತ್ಯವೆಂದು ನಂಬಿ ಯಾರಿಗಾದರೂ ಉಪಕಾರವಾಗಲಿ ಎಂಬ ಉದ್ದೇಶದಿಂದ ಸಾಮಾಜಿಕ ಜಾಲ ತಾಣದಲ್ಲಿ ಹಂಚಿದವರ ಪರಿಸ್ಥಿತಿ ದೇವರಿಗೆ ಪ್ರೀತಿ.
ದೇಶದ ಪ್ರಸಿದ್ಧ ಶಾಪಿಂಗ್ ಮಾಲ್ ಡಿಮಾರ್ಟ್ ಸಂಸ್ಥೆಯ ಶಾಖೆಯೊಂದು ಉಳ್ಳಾಲ ತಾಲೂಕಿನ ಕುಂಪಲ-ಬೈಪಾಸ್ ಎಂಬಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಇರುವುದಾಗಿ ಯಾರೋ ವಿಘ್ನ ಸಂತೋಷಿಗಳು ಜಾಲತಾಣಗಳಲ್ಲಿ ಜಾಹೀರಾತು ಹರಿಯಬಿಟ್ಟಿದ್ದು, ನಿನ್ನೆ ಸಂಜೆಯಿಂದ ಪುಲ್ ವೈರಲ್ ಆಗಿತ್ತು. ಇದನ್ನು ನೋಡಿದ ಹಲವರು ಉದ್ಯೋಗ ಅರಸಿ ಮಾಲ್ ಕಡೆಗೆ ಧಾವಿಸಿ ಬಂದಿದ್ದು, ನೂರಾರು ಮುಗ್ಧ ಜನರಿಗೆ ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿಗಳು ಸತ್ಯ ವಿಚಾರ ಸ್ಪಷ್ಟಪಡಿಸುವಲ್ಲಿ ಬೇಸತ್ತು ಹೈರಾಣಾಗಿದ್ದಾರೆ. ಈ ಒಂದು ಮಾಹಿತಿಯಲ್ಲಿ ಅನಕ್ಷರಸ್ಥರಿಂದ ಹಿಡಿದು ಪದವೀಧರರಿಗೂ ಉದ್ಯೋಗಾವಕಾಶಗಳು ಲಭ್ಯವಿದೆಯೆಂಬ ಜಾಹೀರಾತನ್ನು ಹರಿಯಬಿಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶೇಷವೆಂದರೆ ಜಾಹೀರಾತಿನಲ್ಲಿ ಡಿಮಾರ್ಟ್ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಫೋನ್ ನಂಬರ್, ಈಮೇಲ್ ವಿಳಾಸಗಳನ್ನು ಹಾಕಿಲ್ಲ. ಅನೇಕ ಮಂದಿ ಸುಶಿಕ್ಷಿತರು ಕೂಡ ಇಂತಹ ಜಾಹೀರಾತುಗಳನ್ನು ಸರಿಯಾಗಿ ಪರಿಶೀಲಿಸದೆ ವಿವಿಧ ವಾಟ್ಸಪ್ ಗ್ರೂಪ್ ಗಳಿಗೆ ನೂಕಿದ್ದಲ್ಲದೆ, ತಮ್ಮ ಸ್ಟೇಟಸ್ ಗಳಿಗೂ ಅಪ್ಲೋಡ್ ಮಾಡಿದ್ದರು. ಇದನ್ನೇ ನಂಬಿದ ಮುಗ್ಧ ಜನರು ನಿನ್ನೆಯಿಂದ ಬೈಪಾಸಿನ ಡಿಮಾರ್ಟ್ ಎದುರಲ್ಲಿ ಜಮಾಯಿಸಿದ್ದು ಕೆಲಸಕ್ಕಾಗಿ ಮುಗಿ ಬಿದ್ದಿದ್ದಾರೆ. ಅಸಲಿಗೆ ಡಿಮಾರ್ಟ್ ಸಂಸ್ಥೆಯು ಉದ್ಯೋಗಾವಕಾಶದ ಬಗ್ಗೆ ಯಾವುದೇ ಜಾಹೀರಾತು ನೀಡಿಲ್ಲವೆಂದು ಬೇಸ್ತು ಬಿದ್ದು ಉದ್ಯೋಗ ಅರಸಿ ಬಂದ ಜನರಲ್ಲಿ ಡಿಮಾರ್ಟ್ ಸೆಕ್ಯುರಿಟಿ ಸಿಬ್ಬಂದಿ ಸಮಜಾಯಿಷಿ ನೀಡಿದ್ದಾರೆ. ಇದೇ ಫೆಬ್ರವರಿ ತಿಂಗಳ ಕೊನೆಯೊಳಗೆ ಡಿಮಾರ್ಟ್ ಶಾಪಿಂಗ್ ಮಾಲ್ ವಹಿವಾಟು ಆರಂಭಿಸಲಿದ್ದು, ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅದಾಗಲೇ ನಿನ್ನೆಯಿಂದ ಸುಮಾರು ಐನೂರಕ್ಕೂ ಅಧಿಕ ಮಂದಿ ಇಲ್ಲಿಗೆ ಉದ್ಯೋಗ ಅರಸಿ ಬರುತ್ತಲೇ ಇದ್ದಾರೆಂದು ಡಿಮಾರ್ಟ್ ಶಾಪಿಂಗ್ ಮಾಲ್ ನ ಸೆಕ್ಯೂರಿಟಿಗಳು ತಿಳಿಸಿದ್ದಾರೆ.

0 Comments