ಕುಂಬಳೆ : ಕಳೆದ ದಶಕಗಳಿಂದ ಮಹಿಳೆಯೊರ್ವೆಗೆ ನಿರಂತರ ಕಿರುಕುಳ ನೀಡುತ್ತಿದ್ದ ಶಾಲಾ ಅಧ್ಯಾಪಕ , ಸಿಪಿಎಂ ನೇತಾರನಾದ ಸುಧಾಕರ ಮಾಸ್ತರರ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಯೂತ್ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಇದನ್ನು ಪ್ರತಿಭಟಿಸಿ ಕಳಂಕಿತ ಶಿಕ್ಷಕನನ್ನು ಶಾಲೆಯಿಂದ ಹೊರಗಿರಿಸಬೇಕೆಂದು ಆಗ್ರಹಿಸಿ ಯೂತ್ ಕಾಂಗ್ರೆಸ್ ಕಳತ್ತೂರು ಶಾಲೆಗೆ ಮುತ್ತಿಗೆ ಹಾಕಿದೆ. ಯೂತ್ ಕಾಂಗ್ರೆಸ್ ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ಶಿಕ್ಷಕ ವೃತ್ತಿಗೆ ಕಳಂಕ ತರುವ ಕೃತ್ಯಗಳನ್ನು ಎಸಗಿದ ಸುಧಾಕರನ್ ಮಾಸ್ತರ್ ಅವರನ್ನು ಶಾಲಾ ಆಡಳಿತ ಮಂಡಳಿಯು ಶಾಲೆಯಿಂದ ಹೊರಹಾಕಬೇಕೆಂದು ಒತ್ತಾಯಿಸಿ ಕಳತ್ತೂರಿನ ಇಚ್ಲಂಪಾಡಿಯ ಎಯುಪಿಎಸ್ ಶಾಲೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಮಂಜೇಶ್ವರ ವಿಧಾನಸಭಾ ಕ್ಷೇತ್ರ ಯೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜುನೈದ್ ಉರುಮಿ ಅಧ್ಯಕ್ಷತೆಯಲ್ಲಿ ನಡೆದ ಮೆರವಣಿಗೆಯನ್ನು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಶೆರಿಲ್ ಕಯ್ಯಂಕುಡಾಲ್ ಉದ್ಘಾಟಿಸಿದರು. ಎಣ್ಮಕಜೆ ಯುವ ಕಾಂಗ್ರೆಸ್ ಕ್ಷೇತ್ರದ ಅಧ್ಯಕ್ಷ ಫಾರೂಕ್ ಪಿಎಂ ದಯಾನಂದ ಬಾಡೂರು, ರವಿರಾಜ್ ಮತ್ತು ಇತರರು ಮೆರವಣಿಗೆಯ ನೇತೃತ್ವ ವಹಿಸಿದ್ದರು. ಯುವ ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆ ಶಾಲೆಗೆ ತಲುಪುವ ಮೊದಲೇ ಪೊಲೀಸರು ಮೆರವಣಿಗೆಯನ್ನು ತಡೆದರು. 1995 ರಿಂದ ಸುಧಾಕರನ್ ಮಹಿಳೆಗೆ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಮತ್ತು ಈಗ ಕಿರುಕುಳದ ಜೊತೆಗೆ, ತನ್ನ ಪತಿ ಮತ್ತು ಮಕ್ಕಳು ಸೇರಿದಂತೆ ತನ್ನ ಕುಟುಂಬಕ್ಕೆ ಸುಧಾಕರನ್ ನಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಮಹಿಳೆ ಡಿಜಿಪಿಗೆ ದೂರು ನೀಡಿದ್ದರು.

0 Comments