ಕಾಸರಗೋಡು: ಈಜುಕೊಳದಲ್ಲಿ ಕೆಲಸ ಮಾಡುತ್ತಿದ್ದಾಗ ಪ್ಲಂಬಿಂಗ್ ಕೆಲಸಗಾರನೊಬ್ಬ ವಿದ್ಯುತ್ ಆಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಮಧೂರಿನ ಪಟ್ಲ ಬಳಿ ನಡೆದಿದೆ. ಬೆಳ್ಳೂರಿನ ಮುಕ್ಕಡಂಗೋಳಿಯ ಚಿಕ್ಕಪ್ಪ ರೈ - ರತ್ನಾವತಿ ದಂಪತಿಯ ಪುತ್ರ ಪ್ರಭಾಕರ ರೈ (39) ಮೃತ ಯುವಕ. ಮಧೂರಿನ ಪಟ್ಲ ಸರ್ಕಾರಿ ಶಾಲೆಯ ಬಳಿಯ ಅಬ್ದುಲ್ಲಾ ಎಂಬ ವ್ಯಕ್ತಿಯ ಅಂಗಳದಲ್ಲಿರುವ ಈಜುಕೊಳದಲ್ಲಿ ಈ ಅಪಘಾತ ಸಂಭವಿಸಿದೆ. ಸಂಜೆ 4 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದ ಮಾಹಿತಿ ತಡರಾತ್ರಿ ಬೆಳಕಿಗೆ ಬಂದಿದೆ. ಅಗ್ನಿಶಾಮಕ ದಳ ಆಗಮಿಸಿ ಪ್ರಭಾಕರ ರೈ ಅವರ ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದಿದೆ.
ಮುಹಾದ್ ಎಂಬ ವ್ಯಕ್ತಿ ಈಜುಕೊಳ ನಿರ್ಮಾಣದ ಉಸ್ತುವಾರಿ ವಹಿಸಿದ್ದು, ಪ್ರಭಾಕರ ರೈ ಅವರ ಸಹಾಯಕರಾಗಿ ಕೆಲಸಕ್ಕೆ ಬಂದಿದ್ದರು. ಉಪವಾಸದ ಕಾರಣ ಮುಹಾದ್ ಸಂಜೆ 4 ಗಂಟೆ ಸುಮಾರಿಗೆ ಕೆಲಸ ನಿಲ್ಲಿಸಿದ್ದು, ಅದಾದ ನಂತರ ಇವರು ಒಬ್ಬನೇ ಕೆಲಸ ನಿರ್ವಹಿಸುವ ವೇಳೆ ಈ ದುರ್ಘಟನೆ ಸಂಭವಿಸಿರಬೇಕೆಂದು ಊಹಿಸಲಾಗಿದೆ. ರಾತ್ರಿಯಾದರೂ ಕೆಲಸ ಮುಗಿಸಿ ಪ್ರಭಾಕರ ರೈ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಸಾವಿನ ಮಾಹಿತಿ ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸಂಜೆ 4 ಗಂಟೆಯ ನಂತರ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ ಅಕ್ಷತಾ, ಒಬ್ಬನೇ ಮಗ ತುಷಾನ್, ಸಹೋದರರಾದ ಸುಧಾಕರ ರೈ, ಕರುಣಾಕರ ರೈ ಎಂಬಿವರನ್ನು ಅಗಲಿದ್ದಾರೆ.

0 Comments