ಮುಂಬಯಿ : ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹಾಗೂ ಸಮಾಜದ ಮುಂಚೂಣಿ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರ ನಡುವಿನ ಬಿನ್ನಾಭಿಪ್ರಾಯಗಳು ಸುಖಾಂತ್ಯಗೊಂಡಿದ್ದು, ಸಮುದಾಯದ ಏಳಿಗೆಯ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ.
ಫೆಬ್ರವರಿ 26ರಂದು ಕಾಂದಿವಲಿ ಪೂರ್ವದ ಠಾಕೂರ್ ವಿಲೇಜ್‌ನಲ್ಲಿ 'ಸೋರಾ ಬೈ ನೈನ್' ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಮಾಜಿ ಸಂಸದ ಗೋಪಾಲ್ ಸಿ. ಶೆಟ್ಟಿ ಸಮಕ್ಷಮದಲ್ಲಿ ನಡೆದ ಸಂಧಾನ ಸಭೆಯಲ್ಲಿ ಐಕಳ ಹರೀಶ್ ಶೆಟ್ಟಿ ಹಾಗೂ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಮಾರ್ಗದರ್ಶನದ ಮಾತುಗಳನ್ನಾಡುತ್ತಾ, ಸಮಾಜಕ್ಕೆ ಸೇವೆಯನ್ನು ಮಾಡುತ್ತಾ ಬಂದವರು ನೀವು ನಿಮ್ಮ ಸೇವೆ ಸಮಾಜಕ್ಕೆ ಇನ್ನಷ್ಟು ಅಗತ್ಯವಾಗಿದೆ. ಮನಸ್ಸಿನಲ್ಲಿರುವ ಯಾವುದೇ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಸಮಾಜದ ಒಗ್ಗಟ್ಟಿಗೆ ಮತ್ತು ಅಭಿವೃದ್ಧಿಗೆ ಪೂರಕವಾಗುವ ಕಾರ್ಯ ನಿರಂತರ ಮಾಡುತ್ತಿರಿ ಎಂದು ಹಾರೈಸಿದರು.
ಶಶಿಧರ್ ಶೆಟ್ಟಿ ಬರೋಡ, ಮಹೇಶ್ ಶೆಟ್ಟಿ ತೆಳ್ಳಾರ್, ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಈ ಮಹತ್ವದ ಸಂಧಾನ ಪ್ರಕ್ರಿಯೆ ನಡೆಯಿತು. ಸಮಾಜದ ಹಿತಾಸಕ್ತಿಯೇ ಸರ್ವೋಚ್ಚ ಎಂಬ ಉದಾತ್ತ ಉದ್ದೇಶದಿಂದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ ಇಬ್ಬರೂ ತಮ್ಮ ವೈಮನಸ್ಸುಗಳನ್ನು ಮರೆತು, ಕೈಜೋಡಿಸಿ ಮುನ್ನಡೆಯುವ ದೃಢ ನಿರ್ಧಾರ ಕೈಗೊಂಡರು. ಈ ಐಕ್ಯತೆಯು ಬಂಟ ಸಮುದಾಯದ ಶಕ್ತಿ ಮತ್ತು ಸಾಂಘಿಕ ಚೈತನ್ಯವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಐಕಳ ಹರೀಶ್ ಶೆಟ್ಟಿಯವರು ಕನ್ಯಾನ ಸದಾಶಿವ ಶೆಟ್ಟಿಯವರಲ್ಲಿ ಕ್ಷಮೆಯಾಚಿಸಿ ನನ್ನಲ್ಲಿ ಅಥವಾ ಒಕ್ಕೂಟದಲ್ಲಿ ಯಾವುದೇ ರೀತಿಯ ಮನಸ್ತಾಪವಿದ್ದರೆ ಕ್ಷಮೆ ಇರಲಿ, ನಮ್ಮ ನಿಮ್ಮೊಳಗೆ ಮಾತಿನ ಮೂಲಕ ಯಾವುದೇ ರೀತಿಯ ಭಿನ್ನಾಭಿಪ್ರಾಯ ಮುಂದೆ ಬಾರದೆ ಇರಲಿ ಎಂದು ಒಬ್ಬರನ್ನೊಬ್ಬರು ತಬ್ಬಿಕೊಂಡ ಬಳಿಕ ಹೂಗುಚ್ಛ ನೀಡಿ ವಿವಾದಕ್ಕೆ ತೆರೆ ಎಳೆದರು.
ಸಂಧಾನ ಸಭೆಯಲ್ಲಿ ಮಾಜಿ ಸಂಸದರಾದ ಗೋಪಾಲ್ ಶೆಟ್ಟಿ, ಸಮಾಜದ ಗಣ್ಯರಾದ ಬರೋಡ ಶಶಿಧರ ಶೆಟ್ಟಿ, ಮಹೇಶ್ ಶೆಟ್ಟಿ ತೆಳ್ಳಾರ್, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್ಸ್, ಪಟ್ಲ ಸತೀಶ್ ಶೆಟ್ಟಿ, ಕೆ. ಕೆ. ಶೆಟ್ಟಿ ಅಹ್ಮದ್‌ನಗರ, ಗಿರೀಶ್ ಶೆಟ್ಟಿ ತೆಳ್ಳಾರ್, ಶಶಿಧರ ಶೆಟ್ಟಿ ಇನ್ನಂಜೆ, ಉಳ್ಳೂರು ಮೋಹನದಾಸ ಶೆಟ್ಟಿ, ಅಶೋಕ್ ಶೆಟ್ಟಿ ಬೆಳ್ಳಾಡಿ, ಅರವಿಂದ್ ಆನಂದ್ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ ಕಲ್ಪವೃಕ್ಷ ಇವರುಗಳ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಿ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಐಕಳ ಹರೀಶ್ ಶೆಟ್ಟಿಯವರ ನಡುವಿನ ಮನಸ್ತಾಪವನ್ನು ಸುಖಾಂತ್ಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಶಶಿಧರ ಶೆಟ್ಟಿ ಬರೋಡ ಅವರು ಫೋನ್ ಮೂಲಕ ಐಕಳ ಹಾಗೂ ಅಶೋಕ್ ಪಕ್ಕಳರ ನಡುವೆ ರಾಜಿ ಮಾತುಕತೆಯನ್ನು ನಡೆಸಿ ಅವರಿಬ್ಬರ ನಡುವೆ ನಡೆದ ಪ್ರಕರಣವನ್ನು ಕೂಡ ಇದೇ ವೇಳೆ ಮುಕ್ತಾಯಗೊಳಿಸಿದರು.
ಚಿತ್ರ, ವರದಿ: ದಿನೇಶ್ ಕುಲಾಲ್

0 Comments