ವಿಟ್ಲ : ಮಾತೃಭೂಮಿ ಯುವ ವೇದಿಕೆ ಮಾಣಿಲ ಇದರ ವತಿಯಿಂದ 5ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಮಾಣಿಲ ಗ್ರಾಮದ ಸುಮಾರು 150 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಸಾಧಕರಿಗೆ ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ಮಾಣಿಲ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮದ ಜೊತೆಗೆ ವಿಶೇಷವಾಗಿ ಸಾಧನೆಗೈದ ಪ್ರತಿಭೆಗಳಿಗೆ ಗೌರವಾರ್ಪಣೆಯು ಗಣ್ಯರ ಸಮ್ಮುಖದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಮಾಜಿಕ ಮುಂದಾಳು ಹಾಗೂ ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ಮಾರ್ಗದರ್ಶಕರು ಆದ ಅರುಣ್ ಕುಮಾರ್ ಪುತ್ತಿಲ ಅವರು ಸಂಘದ ಸಂಘಟನಾ ಶಕ್ತಿ ಹಾಗೂ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. 'ಒಂದು ಗ್ರಾಮದಲ್ಲಿ ಯುವಶಕ್ತಿ ಒಟ್ಟಾಗಿ ಒಂದೇ ಚಿಂತನೆ ಧ್ಯೇಯ ಉದ್ದೇಶಗಳನ್ನು ಇಟ್ಟುಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಿದಲ್ಲಿ ಆ ಊರಿನ ಜನಗಳ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ಈ ಸಂಘಟನೆಯು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ಸಲಕರಣೆಗಳನ್ನು ಕೊಟ್ಟು ಶಿಕ್ಷಣ ಕ್ಷೇತ್ರಕ್ಕೆ ಪ್ರೋತ್ಸಾಹಿಸಿ, ಬೇರೆ ಬೇರೆ ರೀತಿಯ ಕೆಲಸ ಕಾರ್ಯಗಳನ್ನು ಮಾಡುತ್ತ ತನ್ನ ಕನಸುಗಳನ್ನು ನನಸು ಮಾಡಲಿ. ನಾವೆಲ್ಲರು ಅವರ ಬೆನ್ನೆಲುಬಾಗಿ ನಿಲ್ಲುವ, ಉತ್ತಮ ಕಾರ್ಯಗಳಿಗೆ ಕೈ ಜೋಡಿಸುವ' ಎಂದು ಮಾಣಿಲದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವದಲ್ಲಿ ಸಂಘವು ಆಯೋಜಿಸಿರುವ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ರೇವತಿ ಪೆರ್ನೆ ಇವರು ಮಾತನಾಡಿ 'ಒಂದು ಗ್ರಾಮದ ಪುಟಾಣಿ ಮಕ್ಕಳಿಂದ ಹಿಡಿದು ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಈ ಸಂಘದ ಕಾರ್ಯ ಅತ್ಯದ್ಭುತ, ಹೀಗೆ ಮುಂದೆಯೂ ಉತ್ತಮ ರೀತಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ. ಒಳ್ಳೆಯ ಹೆಸರು ಕೀರ್ತಿಯನ್ನುಗಳಿಸಲಿ' ಎಂದು ಶುಭ ಹಾರೈಸಿದರು. ಇನ್ನೋರ್ವ ಅತಿಥಿ ಮುರುವ ನಡುಮನೆ ಮಹಾಬಲ ಭಟ್ ಇವರು ಮಾತನಾಡಿ ಗ್ರಾಮದಲ್ಲಿ ಮೂಲ ಸೌಕರ್ಯದ ಜೊತೆಗೆ ಶಾಲೆ ಪ್ರಾರಂಭಿಸಲು ಪಟ್ಟ ಕಷ್ಟ ಶ್ರಮದ ಬಗ್ಗೆ ಮೆಲುಕು ಹಾಕುತ್ತ 'ಇಂತಹ ಸಂಘಟನೆಗಳು ಕೆಲವೊಂದು ಆಯಾಮಗಳಲ್ಲಿ ಊರಿನ ಹಳ್ಳಿಯಲ್ಲಿರುವ ಶಾಲೆಗಳ ಮಕ್ಕಳಿಗೆ ಉಚಿತ ಪಠ್ಯೋಪಕರಣಗಳನ್ನು ನೀಡುವ ಉದ್ದೇಶ ಉತ್ತಮವಾದುದು' ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕಳಕುಂಜ ಮತ್ತು ತಾರಿದಳ ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ 30 ವರ್ಷ ಸೇವೆಯನ್ನು ಮಾಡಿದ ಅಧ್ಯಾಪಕಿ ರೇವತಿ ಕುಕ್ಕಾಜೆ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರಾದ ರೇವತಿ ಕುಕ್ಕಾಜೆ ಮಾತನಾಡಿ ಒಳ್ಳೆಯ ಮನಸ್ಸಿನ ಮತ್ತು ಯಾವುದೇ ಸಮಸ್ಯೆ ಅಥವಾ ಒಂದು ಪರಿಹಾರ ಕೇಳಿದರೆ ತಕ್ಷಣ ಸ್ಪಂದಿಸುವ ರೀತಿಯನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಸಾಧಕರಾದ ಸುದರ್ಶನ್ ತಾರಿದಳ, ಖದೀಜಾ ರಾಶ್ಮಿ ನಾಯರ್ ಮೂಲೆ, ದೀಕ್ಷಾ ಟಿ ತಚ್ಚಮೆ ಇವರನ್ನು ಗೌರವಿಸಲಾಯಿತು. ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ಮಾಣಿಲ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಶ್ರೇಯಾ ಚೌಟ, ಹಿತಶ್ರೀ ಪಿ, ಆಧ್ಯಶ್ರೀ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ಅಧ್ಯಕ್ಷರಾದ ನವೀನ್ ಕುಮಾರ್ ಕಕ್ವೆ ಅವರು ವಹಿಸಿದರು. ಸಂಘದ ಕೋಶಾಧಿಕಾರಿ ಸುದೇಶ್ ಟಿ ಇವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಂಕೋಡು ವಂದಿಸಿದರು. ಸಿಂಚನ, ಶಮಿಕಾ, ಶ್ರೇಯಾ ಪ್ರಾರ್ಥಿಸಿದರು. ಸಮೀಕ್ಷಾ, ಹಿತಶ್ರೀ, ಶ್ರೇಯಾ ಚೌಟ ವಂದೇ ಮಾತರಂ ಹಾಡಿದರು. ಸಂಘದ ಸದಸ್ಯೆ ಅಶ್ವಿನಿ ಪೆರುವಾಯಿ ನಿರೂಪಿಸಿದರು.

.jpeg)
0 Comments