ಕಣ್ಣೂರು : ಕೇಳಕಂನ ಕೋಳಕಾಟ್ಟ್ ತಾನ್ನಿಕುನ್ನುವಿನಲ್ಲಿ ಬಿಜೆಪಿ ಮಹಿಳಾ ನಾಯಕಿಯೊಬ್ಬರನ್ನು ಆಕೆಯ ಮಗನೇ ಕೊಲೆಗೈದ ಘಟನೆ ನಡೆದಿದೆ. ಕೋಳಕಾಟ್ಟ್ ಮಠತ್ತಿಪರಂಬಿಲ್‌ನ ತಙಚ್ಚನ್ ಅವರ ಪತ್ನಿ ಗೀತಾ (50) ಮೃತರಾದ ದುರ್ದೈವಿ. ಶುಕ್ರವಾರ ರಾತ್ರಿ 10.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಪರಸ್ಪರ ಮಾತಿನ ಚಕಮಕಿಯ ನಂತರ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಗೀತಾ ಅವರ ಮಗ ಕ್ರಿಸ್ಟಿ (25) ತಾಯಿಯನ್ನು ಹತ್ಯೆಗೈದ ಬಳಿಕ ಕೇಳಕಂ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಗೀತಾ 'ಮೋನಾಲಿಸಾ' ಹೆಸರಿನಲ್ಲಿ ಕೇಳಕಂನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿರುವ ಕ್ರಿಸ್ಟಿ ಮಾದಕ ವ್ಯಸನಿ ಎನ್ನಲಾಗಿದೆ. ಘಟನೆಯ ಸಮಯದಲ್ಲಿ ಕ್ರಿಸ್ಟಿ ಮತ್ತು ಗೀತಾ ಮಾತ್ರ ಮನೆಯಲ್ಲಿದ್ದು, ಕೊಲೆಯ ನಂತರ, ಸ್ಕೂಟರ್‌ನಲ್ಲಿ ಕೇಳಕಂ ಪೊಲೀಸ್ ಠಾಣೆಯಲ್ಲಿ ಶರಣಾದ. ಗೀತಾ ಶವವನ್ನು ಪೆರಾವೂರ್ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ಮಹಿಳಾ ಮೋರ್ಚಾ ಜಿಲ್ಲಾ ಸಮಿತಿಯ ಸದಸ್ಯೆಯಾಗಿರುವ ಗೀತಾ ಪತಿ, ಓರ್ವಪುತ್ರಿಯನ್ನು ಅಗಲಿದ್ದಾರೆ. ಪೆರಾವೂರ್ ಡಿವೈಎಸ್ಪಿ ಚಂದ್ರಮೋಹನ್ ಮತ್ತು ಕೇಳಕಂ ಎಸ್‌ಎಚ್‌ಒ ಇತಿಹಾಸ್ ಥಾಹಾ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

0 Comments