ಬದಿಯಡ್ಕ: ಒಂದೇ ಮನಸ್ಸಿನಿಂದ ಎಲ್ಲರ ಭಕ್ತಜನರ ಒಗ್ಗೂಡುವಿಕೆ ಬ್ರಹ್ಮಕಲಶೋತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಕಾರಣವಾಗಿದೆ. ಮನುಷ್ಯನ ಜೀವನದ ಲಯವನ್ನು ನಿಯಂತ್ರಿಸುವವ ಶಿವ. ಮಂಗಳವನ್ನು ಉಂಟುಮಾಡುವವನೂ ಶಿವನೇ ಆಗಿದ್ದಾನೆ. ನಮ್ಮೊಳಗಿನ ನಿಲುವನ್ನು ಬದಿಗಿಟ್ಟು ನಾವೆಲ್ಲಾ ಒಂದೇ ಎಂಬ ಭಾವನೆಯಿಂದ ಇಲ್ಲಿನ ಕಾರ್ಯಕ್ರಮ ಯಶಸ್ಸನ್ನು ಕಂಡಿದೆ ಎಂದು ಪರಮಪೂಜ್ಯ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಭಾನುವಾರ ಜರಗಿದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ 10ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನವನ್ನು ನೀಡಿದರು. ಒಡಿಯೂರು ಕ್ಷೇತ್ರದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನವನ್ನು ನೀಡಿ ಮಾತನಾಡುತ್ತಾ ಪೆರಡಾಲ ಶ್ರೀ ಕ್ಷೇತ್ರದಲ್ಲಿ ಸ್ವಚ್ಛತೆಗೆ ಆದ್ಯತೆಯನ್ನು ನೀಡಿದ ಕಾರ್ಯಕರ್ತರ ಶ್ರಮ ನಿಜಕ್ಕೂ ಶ್ಲಾಘನೀಯ. ಎಲ್ಲವೂ ಇದ್ದರೂ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ಧ್ಯಾನ ಮತ್ತು ದಾನದ ಮೂಲಕ ನಾವು ಪ್ರಬುದ್ಧರಾಗಬೇಕು. ರಾಗ ದ್ವೇಷಗಳನ್ನು ಮೀರಿ ನಿಜಾರ್ಥದಲ್ಲಿ ನಾಡಿನ ಜನರ ಪ್ರೀತಿಯನ್ನು ಗಳಿಸಬೇಕು. ಸನಾತನ ಹಿಂದೂ ಧರ್ಮದ ದೀಪವನ್ನು ಬೆಳಗಿಸುವ ಜವಾಬ್ದಾರಿ ನಮಗೆಲ್ಲ ಇದೆ ಎಂದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಬ್ರಹ್ಮಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣ ದಿವ್ಯಉಪಸ್ಥಿತರಿದ್ದು ಮಾತನಾಡಿ ಸಂಸ್ಕಾರಯುತವಾದ ಹಿಂದೂ ಧರ್ಮದಲ್ಲಿ ಹುಟ್ಟಿದ ನಮ್ಮನ್ನು ಕಣ್ಣಿಗೆ ಕಾಣದ ಅದೃಷ್ಟಶಕ್ತಿ ರಕ್ಷಿಸುತ್ತದೆ. ದೃಢವಿಶ್ವಾಸದ ಪ್ರಾರ್ಥನೆಗೆ ದೇವರ ಅನುಗ್ರಹವಿರುತ್ತದೆ. ನಾವು ದೇವರನ್ನು ಗಟ್ಟಿಯಾಗಿ ಹಿಡಿದರೆ ದೇವರು ನಮ್ಮನ್ನು ರಕ್ಷಿಸುತ್ತಾರೆ ಎಂದರು. ಪೆರಿಯ ಗೋಕುಲಂ ಗೋಶಾಲೆಯ ಬ್ರಹ್ಮಶ್ರೀ ವಿಷ್ಣುಹೆಬ್ಬಾರ್, ಆರ್. ಕೆ.ನಾಯರ್ ಗುಜರಾತ್, ಚಿತ್ರನಟ ಶಿವಧ್ವಜ್, ಕಾರ್ತಿಕ್ ಶೆಟ್ಟಿ ಕನ್ಯಾನ, ಜ್ಯೋತಿಷಿ ವೆಂಕಟೇಶ್ವರ ಭಟ್ ಕುಂಜಾರು, ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ರಾಘವೇಂದ್ರ ಎಸ್. ಭಟ್, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮಭಟ್ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ, ಮಾಜಿ ಆಡಳಿತ ಮೊಕ್ತೇಸರರುಗಳಾದ ಟಿ.ಕೆ.ನಾರಾಯಣ ಭಟ್, ಪಿ.ಜಿ.ಚಂದ್ರಹಾಸ ರೈ ಪೆರಡಾಲಗುತ್ತು, ಗೋವಿಂದ ಪ್ರಕಾಶ ಚಾಳೆತ್ತಡ್ಕ, ಬಾಲಕೃಷ್ಣಭಟ್ ಪಿ.ಎಸ್., ಕಾರ್ತಿಕ್ ಶೆಟ್ಟಿ ಮಜಿಬೈಲು, ಕಾರ್ಯದರ್ಶಿ ಭಾಸ್ಕರ ಪಂಜಿತ್ತಡ್ಕ, ಸದಾಶಿವ ಬಂಗೇರ ಮುರಿಯಂಕೂಡ್ಲು, ವಿವೇಕ್ ಪ್ರಸಾದ್ ಪಟ್ಟಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ವಂದಿಸಿದರು. ಕೃಷ್ಣ ಡಿ.ಬೆಳಿಂಜ ಕಾರ್ಯಕ್ರಮ ನಿರೂಪಿಸಿದರು.

0 Comments