ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿರಿಯ ಕಂದಾಯ ಅಧಿಕಾರಿಯೊಬ್ಬರ 22 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಆಗ್ನೇಯ ದೆಹಲಿಯ ಅಮರ್ ಕಾಲೊನಿಯ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಗ್ನೇಯ ದೆಹಲಿ ಡಿಸಿಪಿ ಡಾ.ಹೇಮಂತ್ ತಿವಾರಿ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದೆ. ಪ್ರಾಥಮಿಕ ವರದಿಯಲ್ಲಿ, ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಮೊಬೈಲ್ ಚಾರ್ಜರ್ ಕೇಬಲ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ತಿಳಿದು ಬಂದಿದೆ.
ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯುವತಿಯ ಹೊರತಾಗಿ ಯಾರೂ ಇರಲಿಲ್ಲ. ಪೋಷಕರು ಜಿಮ್ಗೆ ಹೋಗಿದ್ದು, ಮರಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಧಿಕಾರಿಯ ಮನೆಯಲ್ಲಿ ಈ ಹಿಂದೆ 19 ವರ್ಷದ ಯುವಕ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕೆಲಸದಿಂದ ಕಿತ್ತು ಹಾಕಲಾಗಿತ್ತು. ಆತನೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

0 Comments