Ticker

6/recent/ticker-posts

Ad Code

ವಾಣೀನಗರದ ಯುವ ಸಂಗಮ ಯೂತ್ ಕ್ಲಬ್ 15ನೇ ವಾರ್ಷಿಕೋತ್ಸವ ಆಚರಣೆ : ಯಕ್ಷಗಾನ ಬಯಲಾಟ ಪ್ರದರ್ಶನ

 

ಪೆರ್ಲ: ಹಲಸು ಮರದಲ್ಲೆ ಇದ್ದರೆ ಕೊಳೆತು ನಾಶವಾಗುತ್ತದೆ. ಹಲಸನ್ನು ಕೊಯ್ದು ಮೌಲ್ಯವರ್ಧಿತ ಉತ್ಪನ್ನವಾಗಿ ಪರಿವರ್ತಿಸಿದರೆ ಅದರ ಬೇಡಿಕೆ ಹಾಗೂ ಮೌಲ್ಯ ಹೆಚ್ಚುತ್ತದೆ. ಅದೇ ರೀತಿ ಯುವ ಚೈತನ್ಯದ ಸದ್ಬಳಕೆಯಿಂದ ನಮ್ಮ ನಾಡು ಹಾಗೂ ದೇಶ ಅಭಿವೃದ್ಧಿಯಾಗುವುದು. ಯುವ ಶಕ್ತಿಯ ಮೌಲ್ಯ ವರ್ಧನೆಯಾಗಬೇಕು ಎಂದು ಪೆರ್ಲ ಶ್ರೀ ಸತ್ಯನಾರಾಯಣ ಶಾಲೆ ನಿವೃತ್ತ ಶಿಕ್ಷಕ  ಉಮೇಶ್ ಪೆರ್ಲ ಹೇಳಿದರು. ಪಡ್ರೆ ವಾಣೀನಗರ ಶಾಲಾ ವಠಾರದಲ್ಲಿ  ನಡೆದ ಯುವ ಸಂಗಮ ಯೂತ್ ಕ್ಲಬ್ ನ 15ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಕ್ಲಬ್ ಅಧ್ಯಕ್ಷ ರವೀಂದ್ರ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಜಯ ಮಣಿಯಂಪಾರೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಸಣ್ಣ ಸಣ್ಣ ಕಾರ್ಯಕ್ರಮಗಳು ಹಳ್ಳಿಯ ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ. ಯುವಶಕ್ತಿಯ ಕ್ರೋಢೀಕರಣದೊಂದಿಗೆ ವಾಣೀನಗರದಲ್ಲಿ ಕಳೆದ 15  ವರ್ಷಗಳಿಂದ ಆಯೋಜಿಸಲಾಗುತ್ತಿರುವ ಕ್ಲಬ್ ವಾರ್ಷಿಕೋತ್ಸವ ಪುಟಾಣಿಗಳು ಸೇರಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಜೊತೆಗೆ ಯಕ್ಷಗಾನ ಕಲೆ ಆಸ್ವಾದನೆಯಲ್ಲಿ ಮಕ್ಕಳಲ್ಲಿ ಉತ್ಸಾಹ ಮೂಡಿಸಲಾಗುತ್ತಿದೆ ಎಂದರು.

ಕ್ಲಬ್ ಸ್ಥಾಪಕಾಧ್ಯಕ್ಷ, ಎಣ್ಮಕಜೆ ಗ್ರಾಪಂ ಮಾಜಿ ಸದಸ್ಯ ನರಸಿಂಹ ಪೂಜಾರಿ ಎಸ್.ಬಿ.ಮಾತನಾಡಿ, ಊರಿನ ಪುಟಾಣಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ಲಬ್ ರಚಿಸಲಾಗಿದೆ. ಪ್ರತಿ ವರ್ಷ ಕ್ಲಬ್ ಕಾರ್ಯಕ್ರಮದಲ್ಲಿ ಊರಿನ ಕೃಷಿಕರು, ನಾಟಿ ವೈದ್ಯರು, ಸಾಧಕರನ್ನು ಗೌರವಿಸಲಾಗುತ್ತಿದೆ ಎಂದರು. ಕ್ಲಬ್ ಕಾರ್ಯದರ್ಶಿ ಭುವನೇಶ್ವರ ಪೊಯ್ಯೆ ಸ್ವಾಗತಿಸಿ, ಸದಸ್ಯ ರವಿ ವಾಣೀನಗರ ವಂದಿಸಿದರು. ಶಿಕ್ಷಕ ಸುಧೀರ್ ಎಸ್.ಪಿ. ನಿರೂಪಿಸಿದರು.

Post a Comment

0 Comments