ಪತ್ತನಂತಿಟ್ಟ : ಮಾದಕವಸ್ತು ವಿರೋಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಯುವಕನೇ ಎಂಡಿಎಂಎ ಸಂಗ್ರಹಿಸಿ ಬಳಕೆ ಹಾಗೂ ಮಾರಾಟ ನಡೆಸುತ್ತಿದ್ದ ಪ್ರಕರಣವೊಂದು ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರಾನ್ನಿ ಸಮೀಪದ ಎಳುಮತ್ತೂರು ನಿವಾಸಿ ಶರ್ಫಿನ್ ಸೆಬಾಸ್ಟಿಯನ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಾದಕವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಹಾಗೂ ಯುವಕರಿಗೆ ಸಲಹೆ ನೀಡುತ್ತಿದ್ದ ಶರ್ಫಿನ್, ಸ್ಥಳೀಯವಾಗಿ ಮಾದಕವಸ್ತು ವಿರೋಧಿ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ. ಆದರೆ, ಆತನ ಮನೆಯಲ್ಲಿ ನಿಷೇಧಿತ ಮಾದಕವಸ್ತು ಸಂಗ್ರಹಿಸಲಾಗಿದೆ ಎಂಬ ಗುಪ್ತ ಮಾಹಿತಿಯ ಆಧಾರದಲ್ಲಿ ಜಿಲ್ಲಾ ಮಾದಕವಸ್ತು ವಿರೋಧಿ ದಳ ಹಾಗೂ ಪೊಲೀಸರು ನಿಗಾ ವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಆನಂದ್ ಅವರ ನಿರ್ದೇಶನದಂತೆ ಪೆರುಂಬೆಟ್ಟಿ ಪೊಲೀಸರು ಹಾಗೂ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ವಿಶೇಷ ಕಾರ್ಯಾಚರಣೆ(DANSAF) ತಂಡ ಮನೆಯಲ್ಲಿ ದಾಳಿ ನಡೆಸಿದ ವೇಳೆ ಶರ್ಫಿನ್ ಆರಂಭದಲ್ಲಿ ತನಿಖಾ ತಂಡದೊಂದಿಗೆ ಸಹಕರಿಸಿದ್ದಾನೆ. ಆದರೆ ತನ್ನ ಕೊಠಡಿಯ ಬದಲಾಗಿ ಬೇರೆ ಕೊಠಡಿಗೆ ಪೊಲೀಸರನ್ನು ಕರೆದೊಯ್ಯಲು ಯತ್ನಿಸಿದಾಗ ಅನುಮಾನ ಮೂಡಿದೆ. ನಂತರ ನಡೆಸಿದ ತಪಾಸಣೆಯಲ್ಲಿ ಪುಸ್ತಕಗಳ ನಡುವೆ ನಿರ್ಮಿಸಿದ್ದ ರಹಸ್ಯ ಜಾಗದಲ್ಲಿ 1.590 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಪುಸ್ತಕದ ಪುಟಗಳೊಳಗೆ ಅಡಗಿಸಿಟ್ಟಿದ್ದ ಮಾದಕವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದೇ ವೇಳೆ ಎಂಡಿಎಂಎ ಸೇವನೆಗಾಗಿ ಬಳಸಲಾಗುತ್ತಿದ್ದ ವಿಶೇಷ ಉಪಕರಣಗಳು, ಗಾಜಿನ ಪೈಪ್‌ಗಳು ಹಾಗೂ ಇತರೆ ಸಾಮಗ್ರಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ವೈಯಕ್ತಿಕ ಬಳಕೆ ಹಾಗೂ ಬೇಡಿಕೆಯಿದ್ದವರಿಗೆ ನೀಡುವ ಉದ್ದೇಶದಿಂದ ಮಾದಕವಸ್ತು ಸಂಗ್ರಹಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯಲ್ಲಿ ಶರ್ಫಿನ್ ವಿರುದ್ಧ ಈ ಹಿಂದೆಯೂ ಮಾದಕವಸ್ತು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಪಾಲಾರಿವಟ್ಟಂ ಹಾಗೂ ಎರಣಾಕುಳಂ ಟೌನ್ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳಿದ್ದು, ಮಹಿಳೆಯರ ಮೇಲಿನ ಹಲ್ಲೆ ಪ್ರಕರಣದಲ್ಲೂ ಆತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಮಾದಕವಸ್ತು ವಿರೋಧಿ ಸಂಘಟನೆಯ ರಾಜ್ಯ ಯುವ ಘಟಕದ ಅಧ್ಯಕ್ಷನೆಂದು ತೋರಿಸುವ ಗುರುತಿನ ಚೀಟಿಯನ್ನೂ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಆದರೆ ಆ ಸಂಘಟನೆ ಹಾಗೂ ಗುರುತಿನ ಚೀಟಿ ಎರಡೂ ನಕಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಆರೋಪಿಗೆ ಎಂಡಿಎಂಎ ಪೂರೈಸುತ್ತಿದ್ದ ಜಾಲ ಹಾಗೂ ಮಾದಕವಸ್ತು ಮಾರಾಟದ ಸಂಪರ್ಕಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

0 Comments