Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬೇಡಿಕೆ ಪಡೆದುಕೊಂಡ ಮೊಟ್ಟೆ : ಮಾರುಕಟ್ಟೆಯಲ್ಲಿ ದರ 8 ರೂ. ಗಡಿ ದಾಟಿತು

ಕಾಸರಗೋಡು : ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಸಾಮಾನ್ಯವಾಗಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗುತ್ತದಾದರೂ, ಈ ಬಾರಿ ಜಾಗತಿಕ ಪರಿಸ್ಥಿತಿ ಹಾಗೂ ಉತ್ಪಾದನಾ ವೆಚ್ಚ ಏರಿಕೆಯೂ ದರ ಹೆಚ್ಚಳಕ್ಕೆ ಕಾರಣವಾಗಿದೆ. ಕೋಳಿಗಳಿಗೆ ನೀಡುವ ಔಷಧಗಳ ಬೆಲೆ ಹೆಚ್ಚಳ ಹಾಗೂ ಮೆಕ್ಕೆಜೋಳ ದರ ಏರಿಕೆಯಿಂದ ಮೊಟ್ಟೆಯ ಬೆಲೆ ಒಂದಕ್ಕೆ 8 ರೂಪಾಯಿ ಗಡಿ ದಾಟಿದೆ.

ಬದಲಾಗುತ್ತಿರುವ ಹವಾಮಾನವೂ ಮೊಟ್ಟೆ ಉತ್ಪಾದನೆಗೆ ಹೊಡೆತ ನೀಡಿದೆ. ಶಾಲೆಗಳು ಆರಂಭವಾಗಿರುವುದರಿಂದ ಬೇಡಿಕೆ ಹೆಚ್ಚಿದ್ದು, ಮೀನು ಲಭ್ಯತೆ ಕಡಿಮೆಯಾಗಿರುವ ಹಿನ್ನೆಲೆ ಮೊಟ್ಟೆ ಸೇವಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಇದರಿಂದ ಪೂರೈಕೆಯ ಮೇಲೆ ಒತ್ತಡ ಹೆಚ್ಚಾಗಿದೆ. ಶಾಲೆಗಳು, ಅಂಗನವಾಡಿಗಳು ಹಾಗೂ ಗರ್ಭಿಣಿಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಪೂರೈಕೆ ನಡೆಯುತ್ತಿರುವುದರಿಂದ ಬೇಡಿಕೆ–ಪೂರೈಕೆಯ ಸಮತೋಲನ ವ್ಯತ್ಯಯಗೊಂಡಿದೆ.

ಗುರುವಾರ ಸಗಟು ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ 7.60 ರೂ. ಆಗಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 8ರಿಂದ 8.50 ರೂ.ಗೆ ಮಾರಾಟವಾಗಿದೆ. ಕಳೆದ ಎರಡು ವಾರಗಳಿಂದ ದರ ಏರಿಕೆಯಾಗುತ್ತಿದ್ದು, ಕಳೆದ ನಾಲ್ಕೈದು ದಿನಗಳಿಂದ ಸ್ಥಿರವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಕರಾವಳಿಯ ಹವಾಮಾನ ಮೊಟ್ಟೆ ಉತ್ಪಾದನೆಗೆ ಪೂರಕವಾಗಿಲ್ಲದ ಕಾರಣ, ಹೊಸಪೇಟೆ, ಚಿತ್ರದುರ್ಗ ಮತ್ತು ದಾವಣಗೆರೆಯಿಂದ ಮೊಟ್ಟೆಗಳನ್ನು ತರಿಸಲಾಗುತ್ತಿದೆ. 

ಈ ಬಾರಿ ಮೊಟ್ಟೆ ಉತ್ಪಾದನೆ ಶೇ.40ರಷ್ಟು ಕುಸಿದಿದೆ ಎಂದು ಉದ್ಯಮಿಗಳು ಹೇಳಿದ್ದು, ಆಷಾಢ ಮಾಸದಲ್ಲಿ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಾಗುವುದು ಹಾಗೂ ಬಳಿಕ ಮೀನು ಲಭ್ಯತೆ ಸುಧಾರಿಸುವುದರಿಂದ ಮೊಟ್ಟೆ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

Post a Comment

0 Comments


ಜಾಹೀರಾತು

Responsive Advertisement