ಬೆಂಗಳೂರು : ಪತಿಗಿಂತ ಹೆಚ್ಚು ಆದಾಯ ಗಳಿಸುವ ಪತ್ನಿಯು ಕೇವಲ ಮಹಿಳೆ ಎಂಬ ಕಾರಣಕ್ಕೆ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಪತ್ನಿಗೆ ಮಧ್ಯಂತರ ಜೀವನಾಂಶವಾಗಿ ತಿಂಗಳಿಗೆ ₹20,000 ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.
ಪ್ರಕರಣದಲ್ಲಿ ಪತಿ, ತನ್ನ ಮಾಸಿಕ ವೇತನ ₹60,646 ಆಗಿದ್ದು, ಪತ್ನಿಯ ಮಾಸಿಕ ಆದಾಯ ₹1 ಲಕ್ಷಕ್ಕೂ ಅಧಿಕವಾಗಿದೆ. ಹೀಗಿರುವಾಗ ತಾನು ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ವಾದಿಸಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲ್ಲಕೂರ್ ಸುಮಲತಾ ಅವರ ಏಕಸದಸ್ಯ ಪೀಠ, ಜೀವನಾಂಶ ಕುರಿತ ನಿರ್ಧಾರ ಕೈಗೊಳ್ಳುವಾಗ ನ್ಯಾಯಾಲಯಗಳು ಎರಡೂ ಪಕ್ಷಗಳ ಆರ್ಥಿಕ ಸ್ಥಿತಿಗತಿಗಳನ್ನು ಸಮಗ್ರವಾಗಿ ಪರಿಗಣಿಸಬೇಕು ಎಂದು ತಿಳಿಸಿತು.
ಪತ್ನಿಯರು ಯಾವಾಗಲೂ ಪತಿಯ ಮೇಲೆಯೇ ಅವಲಂಬಿತರಾಗಿರಬೇಕು ಎಂಬ ಪೂರ್ವಗ್ರಹದಿಂದ ನ್ಯಾಯಾಲಯಗಳು ತೀರ್ಪು ನೀಡಬಾರದು ಎಂದು ಅಭಿಪ್ರಾಯಪಟ್ಟ ಪೀಠ, ಪತ್ನಿ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದು, ಆಕೆಯ ಆದಾಯ ಪತಿಯ ಆದಾಯಕ್ಕಿಂತ ಹೆಚ್ಚಿದ್ದರೆ ಹಾಗೂ ಮಕ್ಕಳ ಪೋಷಣೆ ಸೇರಿದಂತೆ ಹೆಚ್ಚುವರಿ ಹೊಣೆಗಾರಿಕೆಗಳಿಲ್ಲದಿದ್ದರೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಪತ್ನಿಗೆ ಸ್ವತಂತ್ರವಾಗಿ ಜೀವನ ನಿರ್ವಹಿಸಲು ಸಾಧ್ಯವಾಗದ ಸಂದರ್ಭದಲ್ಲಷ್ಟೇ ಜೀವನಾಂಶ ನೀಡುವ ಪ್ರಶ್ನೆ ಉದ್ಭವಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಆದರೆ, ಈ ತೀರ್ಪು ಮಧ್ಯಂತರ ಜೀವನಾಂಶದ ಆದೇಶಕ್ಕೆ ಮಾತ್ರ ಸೀಮಿತವಾಗಿದ್ದು, ವೈವಾಹಿಕ ವ್ಯಾಜ್ಯದ ಅಂತಿಮ ತೀರ್ಪಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯಲ್ಲಿ ಬದಲಾವಣೆಯಾದರೆ ಭವಿಷ್ಯದಲ್ಲಿ ಪತ್ನಿ ಜೀವನಾಂಶವನ್ನು ಪಡೆಯಲು ಸ್ವತಂತ್ರರು ಎಂದು ಸ್ಪಷ್ಟಪಡಿಸಿದೆ.

0 Comments