ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಜೂನ್ 21-ಭಾನುವಾರ), ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಯೋಗವು ಕೇವಲ ದೈಹಿಕ ಕಸರತ್ತಲ್ಲ ಅಥವಾ ಇದು ಯಾವುದೇ ನಿರ್ದಿಷ್ಟ ವಯೋಮಾನದವರಿಗೆ ಸೀಮಿತವಾಗಿಲ್ಲ. ಇದು ಮಾನವ ಚೇತನದ ಅದ್ಭುತ ಅಭಿವ್ಯಕ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಯೋಗವು ಪ್ರತಿಯೊಬ್ಬರನ್ನೂ ಜೋಡಿಸುತ್ತದೆ, ಎಲ್ಲರನ್ನೂ ಒಟ್ಟಿಗೆ ತರುತ್ತದೆ. ಈ ಶುಭ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಾನು ಇಡೀ ಜಗತ್ತಿಗೆ ಹಾಗೂ ಇಡೀ ಮಾನವ ಕುಲಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ ಎಂದು ಅವರು ಶುಭ ಹಾರೈಸಿದರು.
'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಎಂಬ ವಿಷಯದ ಅಡಿಯಲ್ಲಿ ಇಂದು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ 12ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಇದು ಜೀವನದ ಎಲ್ಲಾ ಹಂತಗಳಲ್ಲಿ ಆರೋಗ್ಯಕರ ಮತ್ತು ಸಕ್ರಿಯ ಜೀವನವನ್ನು ಉತ್ತೇಜಿಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುತ್ತದೆ. ವಯಸ್ಸಾದಂತೆ ದೈಹಿಕ ಫಿಟ್‌ನೆಸ್, ಮಾನಸಿಕ ಸಮತೋಲನ ಮತ್ತು ಸಕ್ರಿಯ ಜೀವನವನ್ನು ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರವನ್ನು ಈ ವರ್ಷದ ಥೀಮ್ ಎತ್ತಿ ತೋರಿಸುತ್ತದೆ. ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಂಬ ಈ ವರ್ಷದ ವಿಷಯವನ್ನು ಉಲ್ಲೇಖಿಸಿದ ಅವರು, ವಯಸ್ಸು ಹೆಚ್ಚಾಗುವುದು ಸಹಜ ಪ್ರಕ್ರಿಯೆಯಾಗಿದ್ದರೂ, ಆರೋಗ್ಯ ಮತ್ತು ಸಾಮರ್ಥ್ಯ ಕುಗ್ಗುವುದು ಅನಿವಾರ್ಯವಲ್ಲ ಎಂದು ಹೇಳಿದರು.
ನಮ್ಮ ಗುರಿ 70ರ ವಯಸ್ಸಿನಲ್ಲಿ 50ರ ವಯಸ್ಸಿಗಿಂತ ಹೆಚ್ಚು ಜೀವನಶೈಲಿ ಕಾಯಿಲೆಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೊಂದಿರುವುದಾಗಿರಬೇಕು. 40ರ ವಯಸ್ಸಿನಲ್ಲಿ 20ರ ವಯಸ್ಸಿಗಿಂತ ಹೆಚ್ಚು ಲವಲವಿಕೆ, 50ರ ವಯಸ್ಸಿನಲ್ಲಿ 30ರ ವಯಸ್ಸಿಗಿಂತ ಹೆಚ್ಚು ಚೈತನ್ಯ ಹೊಂದಿರಬೇಕು. ಯೋಗವು ಈ ಗುರಿಗಳನ್ನು ಸಾಧಿಸಲು ನೆರವಾಗುವ ಶಕ್ತಿಶಾಲಿ ಸಾಧನವಾಗಿದೆ. ಹಾಗಾಗಿ ಯೋಗವನ್ನು ಒಂದು ದಿನದ ಆಚರಣೆಯಾಗಿ ನೋಡದೆ, ಜೀವನದ ನಿರಂತರ ಅಭ್ಯಾಸವನ್ನಾಗಿ ಮಾಡೋಣ. ಆರೋಗ್ಯಕರ ವ್ಯಕ್ತಿ, ಆರೋಗ್ಯಕರ ಕುಟುಂಬ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯೋಗವನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಮೋದಿ ಅವರೊಂದಿಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ಒಟ್ಟಿಗೆ ಯೋಗಾಭ್ಯಾಸ ಮಾಡಿದರು. ಕೋಲ್ಕತ್ತಾದ ಹೂಗ್ಲಿ ನದಿಯ ‘ಬಾಬು ಘಾಟ್’ ಬಳಿ ಸುಂದರಬನ್ಸ್ ಸೇರಿದಂತೆ ವಿವಿಧ ಭಾಗಗಳಿಂದ ಬಂದ 500ಕ್ಕೂ ಹೆಚ್ಚು ಬೋಟ್‌ಗಳ (ದೋಣಿಗಳು) ಮೇಲೆ ಯೋಗಪಟುಗಳು ಏಕಕಾಲದಲ್ಲಿ ಯೋಗಾಸನ ಪ್ರದರ್ಶಿಸಿದರು.
ಕೇವಲ ರೆಡ್ ರೋಡ್ ಮಾತ್ರವಲ್ಲದೆ, ಕೋಲ್ಕತ್ತಾದ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲೂ ಯೋಗ ಕೇಂದ್ರಗಳನ್ನು ತೆರೆಯಲಾಗಿತ್ತು. ವಿಕ್ಟೋರಿಯಾ ಮೆಮೋರಿಯಲ್ ಆವರಣ, ಹೌರಾ ಸೇತುವೆಯ ಆಯ್ದ ಭಾಗಗಳು, ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಆವರಣಈ ಎಲ್ಲಾ ಸ್ಥಳಗಳಲ್ಲಿ ಬೆಳಿಗ್ಗೆ ಏಕಕಾಲದಲ್ಲಿ ಹೂವಿನ ಅಲಂಕಾರಗಳ ನಡುವೆ ಸಹಸ್ರಾರು ಜನರು ಯೋಗ ಮಾಡಿದರು.

0 Comments