ಕೊಚ್ಚಿ: ಸಿಎಂಆರ್ ಎಲ್ ಎಕ್ಸಲಾಜಿಕ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಶುಕ್ರವಾರ ಕೊಚ್ಚಿಯಲ್ಲಿರುವ ಇಡಿ ಕಚೇರಿಯಲ್ಲಿ ಹಾಜರಾಗುವಂತೆ ವೀಣಾ ಅವರಿಗೆ ಸೂಚಿಸಲಾಗಿದೆ. ವೀಣಾ ಸಹಿತ ಇತರ ಒಂಬತ್ತು ಜನರಿಗೆ ಇಡಿ ಸಮನ್ಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸಿಎಂಆರ್ ಎಲ್ ನ ಮಾಲೀಕ ಶಶಿಧರನ್ ಕರ್ತಾ ಅವರ ಪುತ್ರ ಶರಣ್ ಎಸ್. ಕರ್ತಾ ಕೂಡ ಸಮನ್ಸ್ ಜಾರಿಯಾಗಿರುವವರಲ್ಲಿ ಸೇರಿದ್ದಾರೆ. ಬ್ಯಾಂಕ್ ದಾಖಲೆಗಳು, ಆಸ್ತಿ ವಿವರಗಳು, ತೆರಿಗೆ ವಿವರಗಳು ಮತ್ತು ವಾಹನಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹಾಜರುಪಡಿಸಬೇಕು ಎಂದು ED ನಿರ್ದೇಶಕರು ತಿಳಿಸಿದ್ದಾರೆ. CMRL-ಎಕ್ಸಲಾಜಿಕ್ ಪ್ರಕರಣವು ಪಿಣರಾಯಿ ವಿಜಯನ್ ಅವರ ಮಗಳಾದ ಟಿ. ವೀಣಾ ಅವರ ಒಡೆತನದ ಐಟಿ ಕಂಪನಿ ಎಕ್ಸಲಾಜಿಕ್ ಸೊಲ್ಯೂಷನ್ಸ್ ಮತ್ತು ಕಪ್ಪು ಮರಳು ಗಣಿಗಾರಿಕೆ ಕಂಪನಿ ಸಿಎಂಆರ್ ಎಲ್ ಕಂಪನಿಯನ್ನು ಒಳಗೊಂಡಿತ್ತು. ಸಿಎಂಆರ್ ಎಲ್ ನೀಡದ ಸೇವೆಗಳಿಗಾಗಿ ವೀಣಾ ಅವರ ಕಂಪನಿಗೆ ದೊಡ್ಡ ಮೊತ್ತದ ಹಣವನ್ನು ಪಾವತಿಸಿದೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿದೆ. ಇತ್ತೀಚಿಗೆ ಇಡಿಯು ವೀಣಾ ಸಹಿತ ಇತರರ ಮನೆಗಳಿಗೆ ಆದಾಯ ತೆರಿಗೆ ದಾಳಿಗೆ ನಡೆಸಿತ್ತು. ಬಳಿಕ ಇಡಿ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತು.

0 Comments