ಅಂಬಾಲ (ಹರಿಯಾಣ), ಜು. 1: ಹರಿಯಾಣದ ಅಂಬಾಲ ಜಿಲ್ಲೆಯ ಧನಿಯೋರಾ ಗ್ರಾಮದಲ್ಲಿ 220 ಅಡಿ ಆಳದ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದ ನಾಲ್ಕು ವರ್ಷದ ಬಾಲಕನನ್ನು 21 ಗಂಟೆಗಳ ಸತತ ರಕ್ಷಣಾ ಕಾರ್ಯಾಚರಣೆಯ ಬಳಿಕ ಹೊರತೆಗೆದರೂ, ಆತನ ಜೀವ ಉಳಿಸಲು ಸಾಧ್ಯವಾಗಿಲ್ಲ.
ನಿರ್ವೈರ್ ಸಿಂಗ್ (4) ಎಂಬ ಬಾಲಕ ಮಂಗಳವಾರ ಬೆಳಗ್ಗೆ ಸುಮಾರು 6.30ರ ವೇಳೆಗೆ ಹೊಲದಲ್ಲಿದ್ದ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದ. ಘಟನೆ ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಆರಂಭದಲ್ಲಿ ರಕ್ಷಣೆಗೆ ಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಹಾಗೂ ಸೇನಾ ಸಿಬ್ಬಂದಿ ಜಂಟಿಯಾಗಿ ಬೃಹತ್ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸುಮಾರು 21 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಬುಧವಾರ ಮುಂಜಾನೆ 3.40ರ ಸುಮಾರಿಗೆ ಬಾಲಕನನ್ನು ಬೋರ್‌ವೆಲ್‌ನಿಂದ ಹೊರತೆಗೆದು ತಕ್ಷಣ ಅಂಬಾಲ ಕಂಟೋನ್ಮೆಂಟ್‌ನ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದರು.
ಕುಟುಂಬದವರ ಮಾಹಿತಿ ಪ್ರಕಾರ, ನಿರ್ವೈರ್ ತನ್ನ ತಂದೆ ಮಂಜಿತ್ ಅವರೊಂದಿಗೆ ಅಜ್ಜ ಕರ್ನೈಲ್ ಸಿಂಗ್ ಅವರಿಗೆ ಆಹಾರ ನೀಡಲು ಹೊಲಕ್ಕೆ ತೆರಳಿದ್ದ. ಹೊಲಕ್ಕೆ ತಲುಪಿದ ಬಳಿಕ ಕರ್ನೈಲ್ ಸಿಂಗ್ ಆಹಾರ ಸೇವಿಸುತ್ತಿದ್ದರೆ, ಮಂಜಿತ್ ಕೆಲಸದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಬಾಲಕ ಆಟವಾಡುತ್ತಾ ಹೊಲದಲ್ಲಿದ್ದ ತೆರೆದ ಬೋರ್‌ವೆಲ್ ಬಳಿ ತೆರಳಿದ್ದಾನೆ. ಬೋರ್‌ವೆಲ್ ಒಳಗೆ ಮಣ್ಣನ್ನು ಎಸೆಯುವಾಗ ಸುತ್ತಮುತ್ತಲಿನ ನೆಲ ಒದ್ದೆಯಾಗಿದ್ದರಿಂದ ಕಾಲು ಜಾರಿ ಒಳಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ಅಂಬಾಲ ಜಿಲ್ಲಾಧಿಕಾರಿ ಅಜಯ್ ಸಿಂಗ್ ತೋಮರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಸುಮಾರು ಒಂಬತ್ತು ಇಂಚು ವ್ಯಾಸ ಮತ್ತು 220 ಅಡಿ ಆಳದ ಬೋರ್‌ವೆಲ್‌ನಲ್ಲಿ ಬಾಲಕ ಸಿಲುಕಿದ್ದ ಕಾರಣ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋರ್‌ವೆಲ್ ಅನ್ನು ಸುರಕ್ಷಿತವಾಗಿ ಮುಚ್ಚದೆ ತೆರೆದಿಟ್ಟಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ರೈತರು ಮತ್ತು ಭೂಮಾಲೀಕರು ಬಳಕೆಯಲ್ಲಿಲ್ಲದ ಬೋರ್‌ವೆಲ್‌ಗಳನ್ನು ಕಡ್ಡಾಯವಾಗಿ ಮುಚ್ಚಬೇಕು ಎಂದು ಜಿಲ್ಲಾಧಿಕಾರಿ ಅಜಯ್ ಸಿಂಗ್ ತೋಮರ್ ಮನವಿ ಮಾಡಿದ್ದಾರೆ.

0 Comments