ಮಂಗಳೂರು: ನಗರದ ನಾಗುರಿಯಲ್ಲಿ ಮನೆ ಮೇಲೆ ಕಾಂಪೌಂಡ್ ಗೋಡೆ ಕುಸಿದು ಮೂವರು ಮೃತಪಟ್ಟ ದುರಂತ ಪ್ರಕರಣದಲ್ಲಿ ಕಳಪೆ ಕಾಮಗಾರಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಯ ಹಿಂಭಾಗದಲ್ಲಿದ್ದ ಕಾಂಪೌಂಡ್ ಗೋಡೆ ಏಕಾಏಕಿ ಮನೆ ಮೇಲೆ ಕುಸಿದು ಬಿದ್ದ ಪರಿಣಾಮ ದುರಂತ ಸಂಭವಿಸಿದೆ. ನಿರಂತರ ಸುರಿದ ಮಳೆಯಿಂದ ಗೋಡೆಯ ಹಿಂಭಾಗದಲ್ಲಿ ನೀರಿನ ಒತ್ತಡ ಹೆಚ್ಚಾಗಿ ಕುಸಿತ ಸಂಭವಿಸಿರುವ ಸಾಧ್ಯತೆಯಿದ್ದು, ನಿರ್ಮಾಣ ಕಾಮಗಾರಿಯಲ್ಲಿ ಯಾವುದೇ ದೋಷವಿದೆಯೇ ಎಂಬುದನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಕರಣದ ನಿಖರ ಕಾರಣ ಪತ್ತೆಹಚ್ಚಲು ತಾಂತ್ರಿಕ ತಜ್ಞರಿಂದ ವೈಜ್ಞಾನಿಕ ಪರಿಶೀಲನೆ ನಡೆಸಲಾಗುತ್ತಿದ್ದು, ಅವರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ತನಿಖೆಯಲ್ಲಿ ಕಳಪೆ ಕಾಮಗಾರಿ ನಡೆದಿರುವುದು ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ಅನಧಿಕೃತವಾಗಿ ಗುಡ್ಡ ಅಗೆದು ಅಪಾಯದ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣರಾದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
, ಬುಧವಾರ ಮುಂಜಾನೆ ನಾಗುರಿಯ ಹಳೆಯ ಹಂಚಿನ ಮನೆಯ ಮೇಲೆ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಮನೆಯೊಳಗೆ ನಿದ್ದೆಯಲ್ಲಿದ್ದ ಒಬ್ಬ ಮಹಿಳೆ ಹಾಗೂ ಇಬ್ಬರು ಬಾಲಕಿಯರು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯ ವೇಳೆ ಮನೆಯಲ್ಲಿದ್ದ ಆರು ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದು, ಅವರಲ್ಲಿ ಓರ್ವ ಪುರುಷ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದ್ದರು. ಮೃತರನ್ನು ಅನಾಮಿಕ ಚೌರಾಸಿಯ (8), ಪರಿ (4) ಮತ್ತು ಶಾಂತ (46) ಎಂದು ಗುರುತಿಸಲಾಗಿದೆ. ಅಲ್ಕಾ (14), ಅನುಷಾ (11) ಮತ್ತು ಬಾಲಕೃಷ್ಣ (48) ರಕ್ಷಣಾ ಕಾರ್ಯದಲ್ಲಿ ಬದುಕಿ ಉಳಿದವರು ಎಂದು ಗುರುತಿಸಲಾಗಿದೆ.

0 Comments