ನವದೆಹಲಿ : ಖಾಸಗಿ ಇಂಧನ ಮಾರಾಟ ಸಂಸ್ಥೆಯಾದ ನಯಾರಾ ಎನರ್ಜಿ ದೇಶಾದ್ಯಂತ ತನ್ನ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ₹5 ಹಾಗೂ ಡೀಸೆಲ್ ಬೆಲೆಯನ್ನು ಲೀಟರ್‌ಗೆ ₹3ರಷ್ಟು ಇಳಿಕೆ ಮಾಡಿದೆ. ಪರಿಷ್ಕೃತ ದರಗಳು ಬುಧವಾರದಿಂದಲೇ ಜಾರಿಗೆ ಬಂದಿವೆ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ತಗ್ಗಿರುವುದು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ದೇಶಾದ್ಯಂತ ಇರುವ ನಯಾರಾ ಎನರ್ಜಿ ಸಂಸ್ಥೆಯ 7,000ಕ್ಕೂ ಅಧಿಕ ಇಂಧನ ಕೇಂದ್ರಗಳಲ್ಲಿ ಹೊಸ ದರಗಳು ಅನ್ವಯವಾಗಲಿದ್ದು, ರಾಜ್ಯಗಳಲ್ಲಿನ ವ್ಯಾಟ್ ಸೇರಿದಂತೆ ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ಚಿಲ್ಲರೆ ದರದಲ್ಲಿ ವ್ಯತ್ಯಾಸ ಕಂಡುಬರಲಿದೆ.
ಪಶ್ಚಿಮ ಏಷ್ಯಾದ ಸಂಘರ್ಷ ಶಮನಗೊಂಡು ಪ್ರಮುಖ ಸಮುದ್ರ ಮಾರ್ಗಗಳು ಪುನಃ ತೆರೆಯಲ್ಪಟ್ಟಿರುವುದರಿಂದ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಪೂರೈಕೆ ಸುಧಾರಿಸಿದ್ದು, ಇದರ ಪರಿಣಾಮ ಕಳೆದ ಕೆಲವು ವಾರಗಳಿಂದ ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಆದರೆ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ತಮ್ಮ ಇಂಧನ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೇಶದ ಇಂಧನ ಚಿಲ್ಲರೆ ಮಾರುಕಟ್ಟೆಯ ಶೇ.90ಕ್ಕೂ ಅಧಿಕ ಪಾಲು ಈ ಮೂರು ಸಂಸ್ಥೆಗಳದ್ದಾಗಿದೆ.
ಇರಾನ್ ಸಂಘರ್ಷದಿಂದ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಮಾರ್ಚ್ 26ರಂದು ನಯಾರಾ ಎನರ್ಜಿ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ₹5 ಮತ್ತು ಡೀಸೆಲ್ ಬೆಲೆಯನ್ನು ₹3ರಷ್ಟು ಹೆಚ್ಚಿಸಿತ್ತು. ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಮೇ ತಿಂಗಳ ದ್ವಿತೀಯಾರ್ಧದಲ್ಲಿ ಹಂತ ಹಂತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ತಲಾ ₹7.50ರಷ್ಟು ಹೆಚ್ಚಿಸಿದ್ದವು.

0 Comments