ಮೀಯಪದವು : ಮೀಯಪದವುವಿನ ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ವಾಚನ ಸಪ್ತಾಹದ ಸಮಾರೋಪ ಹಾಗೂ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉದ್ಘಾಟನಾ ಸಮಾರಂಭ ಜರುಗಿತು.
ಶಾಲಾ ಪ್ರಬಂಧಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಕಾರ್ಯಕ್ರಮ ಉದ್ಘಾಟಿಸಿ, "ಓದು ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಪರಿಣಾಮಕಾರಿ ಸಾಧನವಾಗಿದ್ದು, ವಾಚನವು ಕೇವಲ ವಾಚನ ಸಪ್ತಾಹಕ್ಕೆ ಸೀಮಿತವಾಗದೆ ಜೀವನ ಪರ್ಯಂತದ ಅಭ್ಯಾಸವಾಗಬೇಕು" ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕ ಹಾಗೂ ಖ್ಯಾತ ಜಾದೂಗಾರ ವಾಸುದೇವ ಕೋಟೂರು ಮಾತನಾಡಿ, "ಓದು ಮನುಷ್ಯನ ಅತ್ಯುತ್ತಮ ಸ್ನೇಹಿತ. ಉತ್ತಮ ಪುಸ್ತಕಗಳು ಧೈರ್ಯ, ಆತ್ಮವಿಶ್ವಾಸ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ" ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ಮೃದುಲ ಶುಭಾಶಯ ಕೋರಿದರು. ಅಧ್ಯಾಪಕ ಪ್ರಭಾಕರ ಎಸ್ ಸ್ವಾಗತಿಸಿ, ಸುಧಾ ಕೆ.ಯಂ ನಿರೂಪಿಸಿದರು. ಸಾವಿತ್ರಿ ಅವರು ವಂದಿಸಿದರು
ವಾಚನ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಾಸುದೇವ ಕೋಟೂರು ಅವರ ಜಾದೂ ಪ್ರದರ್ಶನ ವಿದ್ಯಾರ್ಥಿಗಳನ್ನು ರಂಜಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

0 Comments