ಪುತ್ತಿಗೆ : ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಕಟ್ಟಡ ಉದ್ಘಾಟನೆಯ ಬಗ್ಗೆ ಸ್ಥಾಪಿಸಿದ ಶಿಲಾ ಫಲಕದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯನ ಹೆಸರು ಮರೆ ಮಾಚಿದ ಪ್ರಕರಣ ತೀವ್ರ ಚರ್ಚಾಸ್ಪದವಾಗಿದ್ದು ಇದೀಗ ಪುನಃ ಶಿಲಾ ಫಲಕದಲ್ಲಿ ನಮೂದಿಸುವ ಮೂಲಕ ಪ್ರಕರಣಕ್ಕೆ ಅಂತ್ಯ ಹಾಡಿರುವ ವಿಷಯ ಬೆಳಕಿಗೆ ಬಂದಿದೆ.
ಕಳೆದ ಮಾರ್ಚ್ 3ರಂದು ಕಾಸರಗೋಡು ಅಭಿವೃದ್ಧಿ ಯೋಜನೆಗೊಳಪಡಿಸಿ ಈ ಶಾಲೆಗೆ ನಿರ್ಮಿಸಿದ ಕಟ್ಟಡವೊಂದನ್ನು ಅಂದಿನ ಶಿಕ್ಷಣ ಸಚಿವ ಶಿವನ್ ಕುಟ್ಟಿ ಉದ್ಘಾಟಿಸಿದ್ದರು. ಈ ಬಗ್ಗೆ ಕಾರ್ಯಕ್ರಮದ ಅತಿಥಿ ಗಣ್ಯರ ಹೆಸರು ಉಲ್ಲೇಖಿಸಿ ಶಾಲಾ ಅವರಣದಲ್ಲಿ ಶಿಲಾ ಫಲಕವೊಂದನ್ನು ಸ್ಥಾಪಿಸಲಾಗಿತ್ತು. ಇದರಲ್ಲಿ ಜಿ.ಪಂ.ಪುತ್ತಿಗೆ ಡಿವಿಶನ್ ಸದಸ್ಯ ಸೋಮಶೇಖರ್ ಜೆ.ಎಸ್. ಅವರ ಹೆಸರನ್ನು ದಾಖಲಿಸಲಾಗಿತ್ತು.
ಇದಾದ ಬಳಿಕ ಇದೀಗ ತಿಂಗಳ ಹಿಂದೆ ಯಾರೋ ಕಿಡಿಗೇಡಿಗಳು ಜಿ.ಪಂ.ಸದಸ್ಯನ ಮಾತ್ರ ಹೆಸರನ್ನು ಮರೆ ಮಾಚುವ ದುಷ್ಕೃತ್ಯದ ಮೂಲಕ ತೀವ್ರ ರಾಜಕೀಯ ಚಪಲತೆಯನ್ನು ಹೊರಗೆಡಹಿದ್ದರು. ಇದನ್ನು ಕಂಡ ಜಿ.ಪಂ. ಸದಸ್ಯ ಸೋಮಶೇಖರ್ ಜೆ.ಎಸ್. ಜಿಲ್ಲಾ ಪಂ. ಸಭೆಯಲ್ಲಿ ಈ ಕೃತ್ಯವನ್ನು ಖಂಡಿಸಿ ವಾದ ನಡೆಸಿದ್ದು ತಕ್ಷಣ ಜಿ.ಪಂ. ಅಧ್ಯಕ್ಷ ಸಾಬು ಅಬ್ರಾಹಂ ನೇತೃತ್ವದ ಜಿಲ್ಲಾಡಳಿತವು ಶಿಕ್ಷಣ ಇಲಾಖೆ ಹಾಗೂ ಶಾಲಾ ಅಧಿಕೃತರಿಂದ ಈ ಬಗ್ಗೆ ಸೂಕ್ತ ವರದಿ ಪಡೆಯುವ ಮೂಲಕ ಪುನಃ ಶಿಲಾ ಫಲಕ ಸೂಕ್ತ ಸ್ಥಾಪಿಸಲು ನಿರ್ದೇಶನ ನೀಡಿತ್ತು.
ಇದೀಗ ಶಾಲಾ ಅವರಣದಲ್ಲಿ ಸೋಮಶೇಖರ್ ಜೆ.ಎಸ್. ಅವರ ಹೆಸರು ನಮೂದಿಸಿ ನಿನ್ನೆ ಶಿಲಾ ಫಲಕ ಪುನಃ ಸ್ಥಾಪಿಸಲಾಗಿದೆ. ಸರಕಾರಿ ಶಾಲಾ ಅವರಣದೊಳಗೆ ಕಿಡಿಗೇಡಿ ಕೃತ್ಯಗೈಯುವವರ ನಿರೀಕ್ಷಣೆಗಾಗಿ ಶೀಘ್ರವೇ ಸಿಸಿಟಿವಿಗಳನ್ನು ಅಳವಡಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಎಣ್ಮಕಜೆ ಗ್ರಾ.ಪಂ. ನ ದಕ್ಷ ಅಧ್ಯಕ್ಷರಾಗಿ ಜನಪರ ಕಾರ್ಯ ಯೋಜನೆಗಳೊಂದಿಗೆ ಗುರುತಿಸಿಕೊಂಡಿದ್ದ ಸಕ್ರಿಯ ಯುವ ರಾಜಕಾರಣಿ ಸೋಮಶೇಖರ್ ಜೆ.ಎಸ್. ಅವರ ಸಾಮಾಜಿಕ ಬೆಳವಣಿಗೆಯನ್ನು ಸಹಿಸದ ಕಿಡಿಗೇಡಿಗಳು ಈ ಕೃತ್ಯ ಎಸಗಿರುವುದು ಸ್ಪಷ್ಟವಾಗಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದವು.

0 Comments