ನವದೆಹಲಿ : ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಪೂರ್ಣ ‘ವಂದೇ ಮಾತರಂ’ ಹಾಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಗಾಯನವನ್ನು ನಿಲ್ಲಿಸುವಂತೆ ಸೂಚಿಸಿದ್ದರೂ ಸಂಪೂರ್ಣ ಗೀತೆಯನ್ನು ಹಾಡಲಾಯಿತು ಎಂದು ವರದಿಯಾಗಿದೆ.
‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂಬುದು ಕಾಂಗ್ರೆಸ್‌ನ ನಿಲುವಾಗಿತ್ತು. ಆದರೆ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಇದಕ್ಕೆ ವಿರುದ್ಧವಾಗಿ ಸಂಪೂರ್ಣ ಗೀತೆಯನ್ನು ಹಾಡಲಾಗಿದೆ.
ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಸೇವಾದಳದ ನೇತೃತ್ವದಲ್ಲಿ ‘ವಂದೇ ಮಾತರಂ’ ಗಾಯನ ಆರಂಭಗೊಂಡಿದ್ದು, ಈ ವೇಳೆ ಪಕ್ಷದ ನಾಯಕರು ಮಧ್ಯಪ್ರವೇಶಿಸಿ ಗಾಯನವನ್ನು ನಿಲ್ಲಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೂ ಗಾಯನ ಮುಂದುವರಿದಿದೆ.
ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ‘ವಂದೇ ಮಾತರಂ’ನ ಕೆಲವು ಸಾಲುಗಳನ್ನು ಕೈಬಿಡಬೇಕು ಎಂಬ ನಿಲುವನ್ನು ಕಾಂಗ್ರೆಸ್ ಹೊಂದಿತ್ತು. ನಿರ್ದಿಷ್ಟ ಸಮುದಾಯದವರಿಗೆ ಹಾಡಲು ಸಾಧ್ಯವಾಗದ ಭಾಗವನ್ನು ಕಡ್ಡಾಯಗೊಳಿಸಬಾರದು ಎಂಬುದು ಪಕ್ಷದ ನಿಲುವಾಗಿತ್ತು.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್, ಸೇವಾದಳದ ರಾಷ್ಟ್ರೀಯ ಅಧ್ಯಕ್ಷ ವಿ.ಬಿ. ಶ್ರೀನಿವಾಸ್, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಸಂಪೂರ್ಣ ‘ವಂದೇ ಮಾತರಂ’ ಹಾಡಿರುವುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

0 Comments